ADVERTISEMENT

ವಿಮಾನ ಟಿಕೆಟ್‌ ದರ ಏರಿಕೆ ತಡೆಗೆ ಕ್ರಮ: ಡಿಜಿಸಿಎ ಭರವಸೆ

ಪಿಟಿಐ
Published 8 ಜುಲೈ 2025, 15:59 IST
Last Updated 8 ಜುಲೈ 2025, 15:59 IST
   

ನವದೆಹಲಿ: ವಿಮಾನಯಾನ ಸಂಸ್ಥೆಗಳು ಕೆಲವು ಸಂದರ್ಭಗಳಲ್ಲಿ ವಿಮಾನ ಟಿಕೆಟ್‌ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡುವುದನ್ನು ತಡೆಯಲು ಕಾರ್ಯವಿಧಾನವೊಂದನ್ನು ಜಾರಿಗೆ ತರುವುದಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.

ಸಂಸದೀಯ ಸ್ಥಾಯಿ ಸಮಿತಿ ಸದಸ್ಯರು ಮಂಗಳವಾರ ನಡೆದ ಸಭೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳು, ವಿವಿಧ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳ ಜತೆ ಚರ್ಚಿಸಿದರು. 

ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ಸಂದರ್ಭ ಮತ್ತು ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬಳಿಕ ಕೆಲವು ವಿಮಾನಯಾನ ಸಂಸ್ಥೆಗಳು ಟಿಕೆಟ್‌ ದರ ಬೇಕಾಬಿಟ್ಟಿ ಹೆಚ್ಚಿಸಿದ್ದನ್ನು ಸಮಿತಿಯ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು.

ADVERTISEMENT

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಬಳಿಕ ಶ್ರೀನಗರಿಂದ ವಿವಿಧೆಡೆಗೆ ಸಂಚರಿಸುವ ವಿಮಾನಗಳ ಟಿಕೆಟ್‌ ದರವನ್ನು ಹೆಚ್ಚಿಸಿರುವುದಕ್ಕೆ ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ಅದಕ್ಕೆ ಪ್ರತಿಕ್ರಿಯಿಸಿದ ಡಿಜಿಸಿಎ ಅಧಿಕಾರಿಯೊಬ್ಬರು, ‘ವಿಮಾನಯಾನ ಸಂಸ್ಥೆಗಳೊಂದಿಗೆ ಈ ಕುರಿತು ಚರ್ಚಿಸುತ್ತಿದ್ದೇವೆ. ಇದನ್ನು ತಡೆಯಲು ವ್ಯವಸ್ಥೆಯೊಂದನ್ನು ಜಾರಿಗೆ ತರುವ ಬಗ್ಗೆ ಒಮ್ಮತ ಮೂಡಿಸಲು ಮಾತುಕತೆ ನಡೆಸುತ್ತೇವೆ’ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸಂಸದರೊಬ್ಬರು, ‘ಒಮ್ಮತ ಮೂಡುವವರೆಗೆ ಈ ಅನ್ಯಾಯ ಮುಂದುವರಿಯುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ. ವಿಮಾನಯಾನ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಡಿಜಿಸಿಎಗೆ ಇದೆ ಎಂದು ಇತರ ಕೆಲವು ಸಂಸದರು ಹೇಳಿದ್ದಾರೆ. 

‘ಟಿಕೆಟ್‌ ದರ ಬೇಕಾಬಿಟ್ಟಿಯಾಗಿ ಹೆಚ್ಚಿಸುವುದನ್ನು ತಡೆಯಲು ಮಾರ್ಗಸೂಚಿಗಳನ್ನು ಜಾರಿಗೆ ತರುವುದಾಗಿ ಈ ವೇಳೆ ಡಿಜಿಸಿಎ ಸಭೆಗೆ ತಿಳಿಸಿತು’ ಎಂದು ಮೂಲಗಳು ವಿವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.