
ಜೈರಾಮ್ ರಮೇಶ್
ನವದೆಹಲಿ: ಉದ್ಯಮಿ ಎಲಾನ್ ಮಸ್ಕ್ ಅವರ ‘ಸ್ಟಾರ್‌ಲಿಂಕ್’ ಕಂಪನಿಯ ಜೊತೆಗೆ ಏರ್‌ಟೆಲ್ ಹಾಗೂ ಜಿಯೊ ಕಂಪನಿಗಳು ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಖುಷಿಪಡಿಸಲು ಪ್ರಧಾನಿ ಮೋದಿ ಮುಂದೆನಿಂತು ಈ ಒಪ್ಪಂದ ಮಾಡಿಸಿದ್ದಾರೆ. ಈ ಒಪ್ಪಂದವು ದೇಶದ ಭದ್ರತೆಗೆ ಬೆದರಿಕೆ ಒಡ್ಡಲಿದೆ’ ಎಂದು ಕಾಂಗ್ರೆಸ್ ದೂರಿದೆ.
ಈ ವಿಚಾರಗಳ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ:
* ಇದು ದೇಶದ ಭದ್ರತೆಗೆ ಸಂಬಂಧಿಸಿ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ. ದೇಶದ ಭದ್ರತೆಗೆ ಬೆದರಿಕೆ ಬಂದ ಸಂದರ್ಭದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆಯನ್ನು ರದ್ದು ಮಾಡಬೇಕಾಗುತ್ತದೆ. ಇಂಥ ಸಮಯದಲ್ಲಿ ಇಂಟರ್‌ನೆಟ್ ಸೇವೆಯನ್ನು ರದ್ದು ಮಾಡುವ ಹಕ್ಕು ಸ್ಟಾರ್‌ಲಿಂಕ್ ಬಳಿ ಇರುತ್ತದೆಯೊ ಅಥವಾ ಜಿಯೊ, ಏರ್‌ಟೆಲ್ ಬಳಿ ಇರುತ್ತದೆಯೋ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
* ಸ್ಟಾರ್‌ಲಿಂಕ್ ಕಂಪನಿಯು ಭಾರತದಲ್ಲಿ ತನ್ನ ವ್ಯವಹಾರ ವಿಸ್ತರಿಸಿಕೊಳ್ಳುವುದನ್ನು ಇದೇ ಜಿಯೊ ಹಾಗೂ ಏರ್‌ಟೆಲ್ ಕಂಪನಿಗಳು ವಿರೋಧಿಸುತ್ತಿದ್ದವು. ‘ತರಂಗಾಂತರಗಳನ್ನು ಸರ್ಕಾರವು ಹರಾಜಿನ ಮೂಲಕವೇ (2014ಕ್ಕೂ ಹಿಂದೆ ಇದ್ದ ನಿಯಮದಂತೆ) ಹಂಚಿಕೆ ಮಾಡಬೇಕು’ ಎಂದು ವಾದಿಸಿದ್ದವು. ಆದರೆ, ತಮ್ಮೆಲ್ಲಾ ವಿರೋಧವನ್ನು ಬದಿಗಿರಿಸಿ 12 ತಾಸುಗಳ ಒಳಗಾಗಿ ಎರಡೂ ಕಂಪನಿಗಳು ಸ್ಟಾರ್‌ಲಿಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.