ಚೆನ್ನೈ: ‘ಯಾರು ಎಲ್ಲಿ ಅಡಗಿದ್ದಾರೆ ಎಂಬುದು ನಮಗೆ ಗೊತ್ತಿತ್ತು. ಪಾಕಿಸ್ತಾನ ಗಡಿ ದಾಟಿ ಬಹಳ ನಿಖರವಾದ ದಾಳಿ ನಡೆಸಿ ಉಗ್ರರ ಒಂಬತ್ತು ಅಡಗುದಾಣಗಳನ್ನು ನಾಶಪ ಡಿಸಲಾಯಿತು. ಈ ಕಾರ್ಯಾಚರಣೆ ಯಲ್ಲಿ ಯಾವ ಗುರಿಯೂ ತಪ್ಪಿಲ್ಲ’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಶುಕ್ರವಾರ ಹೇಳಿದರು.
‘ಇಡೀ ಕಾರ್ಯಾಚರಣೆಯು ಮೇ 7ರ ರಾತ್ರಿ 1ಕ್ಕೆ ಆರಂಭಗೊಂಡು, 23 ನಿಮಿಷಗಳ ಒಳಗಾಗಿ ಪೂರ್ಣಗೊಂಡಿತು’ ಎಂದರು.
‘ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿ ನಡೆಸಿದ ಕಾರ್ಯಾಚರಣೆ ಕುರಿತಂತೆ ಕೆಲವರು ತಮಗೆ ಬೇಕಾದ ರೀತಿಯಲ್ಲಿ ವರದಿ ಪ್ರಕಟಿಸಿದರು. ಪಾಕಿಸ್ತಾನದ 13 ವಾಯುನೆಲೆಗಳಿಗೆ ಹಾನಿ ಮಾಡಲಾಗಿದೆ. ಉಪಗ್ರಹಗಳು ಸೆರೆಹಿಡಿದಿರುವ ಚಿತ್ರಗಳು ಈ ಕುರಿತ ವಾಸ್ತವವನ್ನು ತಿಳಿಸುತ್ತವೆ’ ಎಂದು ಹೇಳುವ ಮೂಲಕ ಆಪರೇಷನ್ ಸಿಂಧೂರ ಯಶಸ್ಸು ಕುರಿತು ಅಂತರ ರಾಷ್ಟ್ರೀಯ ಮಾಧ್ಯಮಗಳು ಎತ್ತಿದ್ದ ಪ್ರಶ್ನೆಗಳಿಗೆ ಅವರು ಸೂಚ್ಯವಾಗಿ ಉತ್ತರ ನೀಡಿದರು.
ಐಐಟಿ ಮದ್ರಾಸ್‌ನಲ್ಲಿ ನಡೆದ 62ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಆಪರೇಷನ್ ಸಿಂಧೂರ ಮುಗಿದ ನಂತರ, ಕೆಲವರು ಪಾಕಿಸ್ತಾನ ನಡೆಸಿದೆ ಎನ್ನಲಾದ ಪ್ರತಿದಾಳಿ ಕುರಿತು ಮಾತನಾಡಿದರು. ಹಾಗಿದ್ದರೆ, ಪಾಕಿಸ್ತಾನದ ದಾಳಿಯಿಂದ ಭಾರತದ ಪಡೆಗಳಿಗೆ ಆಗಿರುವ ಹಾನಿ ಕುರಿತಾದ ಒಂದೇ ಒಂದು ಚಿತ್ರವನ್ನು ಯಾರಾದರೂ ತೋರಿಸುವಿರಾ’ ಎಂದು ಡೊಭಾಲ್ ಪ್ರಶ್ನಿಸಿದರು.
‘ಆಪರೇಷನ್ ಸಿಂಧೂರ ಯಶಸ್ಸಿ ನಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿ ಸಿರುವ ಶಸ್ತ್ರಾಸ್ತ್ರಗಳ ಕೊಡುಗೆ ಅನನ್ಯ. ಬ್ರಹ್ಮೋಸ್ ಕ್ಷಿಪಣಿಗಳಿರ ಬಹುದು, ಸಮಗ್ರ ವಾಯು ಪ್ರದೇಶ ನಿಯಂತ್ರಣ ವ್ಯವಸ್ಥೆ ಇರಬಹುದು, ಈ ಎಲ್ಲವುಗಳ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದರು.
ಇದಕ್ಕೂ ಮುನ್ನ ಮಾತನಾಡಿದ, ಖ್ಯಾತ ಭರತನಾಟ್ಯ ಕಲಾವಿದೆ ಪದ್ಮಾ ಸುಬ್ರಹ್ಮಣ್ಯಂ,‘ಆಪರೇಷನ್ ಸಿಂಧೂರಕ್ಕೆ ಸಿಕ್ಕ ಜಯ ಐತಿಹಾಸಿಕ. ಈ ಕಾರ್ಯಾಚರಣೆಯು ಶೌರ್ಯ–ಸಾಹಸಗಳ ಕುರಿತು ಭಗವದ್ಗೀತೆಯಲ್ಲಿ ಹೇಳಿರುವುದರ ಅಭಿವ್ಯಕ್ತಿಯಂತಿತ್ತು’ ಎಂದರು.
‘ವಿದೇಶಿ ಪತ್ರಿಕೆಗಳು ಪಾಕಿಸ್ತಾನ ಅದನ್ನು ಮಾಡಿದೆ. ಇದನ್ನು ಮಾಡಿದೆ ಎಂದು ವರದಿ ಮಾಡಿವೆ. ಭಾರತದ ಯಾವುದೇ ಒಂದು ಕಟ್ಟಡಕ್ಕೆ ಪಾಕಿಸ್ತಾನ ಹಾನಿ ಮಾಡಿರುವ ಚಿತ್ರವಿದ್ದರೆ ನನಗೆ ತೋರಿಸಿ. ಅವರ ದಾಳಿಯಿಂದ ಕನಿಷ್ಠ ಒಂದು ಗಾಜಿನ ಫಲಕವಾದರೂ ಮುರಿದಿದ್ದರೆ ತೋರಿಸಿ. ಈಗ ಎಲ್ಲೆಡೆ ಹರಿದಾಡುತ್ತಿರುವ ಚಿತ್ರಗಳು ಮೇ 10ರ ಮೊದಲು ಮತ್ತು ನಂತರ ಪಾಕಿಸ್ತಾನದಲ್ಲಿ 13 ವಾಯುನೆಲೆಗಳ ಮೇಲೆ ದಾಳಿ ನಡೆಸಿ ಭಾರತದ ವಾಯುಪಡೆ ಮಾಡಿರುವ ಹಾನಿಯದ್ದಾಗಿದೆ’ ಎಂದಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ, ಪಾಕಿಸ್ತಾನ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ದಾಳಿಗೆ ಮುಂದಾದಾಗ ಪಾಕಿಸ್ತಾನ ವಾಯುನೆಲೆಗಳನ್ನು ಭಾರತ ಧ್ವಂಸ ಮಾಡಿತ್ತು.
ಪಾಕಿಸ್ತಾನದ ಯುದ್ಧ ವಿಮಾನಗಳ ಉಡಾವಣೆ ಸಾಮರ್ಥ್ಯವನ್ನು ನಾಶ ಮಾಡಲು ಭಾರತ 15 ಬ್ರಹ್ಮೋಸ್ ಕ್ಷಿಪಣಿಗಳನ್ನು ಪಾಕಿಸ್ತಾನದ ವಾಯುನೆಲೆಗಳ ಮೇಲೆ ಉಡಾಯಿಸಿತ್ತು. ಈ ಕಾರ್ಯಾಚರಣೆಯಲ್ಲಿ ಸ್ವದೇಶಿ ನಿರ್ಮಿತ ಯುದ್ಧೋಪಕರಣಗಳು ಪ್ರಮುಖ ಪಾತ್ರ ವಹಿಸಿದವು ಎಂದು ಡೊಬಾಲ್ ಒತ್ತಿ ಹೇಳಿದರು. ದೇಶೀಯವಾಗಿ ಮತ್ತಷ್ಟು ತಂತ್ರಜ್ಞಾನ ಅಭಿವೃದ್ಧಿಯ ಅಗತ್ಯವಿದೆ ಎಂದೂ ಹೇಳಿದರು.
ಐಐಟಿ ಮದ್ರಾಸ್ ಕೊಡುಗೆ ಶ್ಲಾಘನೆ
ದೇಶದ ಭದ್ರತಾ ಪಡೆಗಳಿಗೆ ಅಗತ್ಯವಿರುವ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ಐಐಟಿ ಮದ್ರಾಸ್ ಹಾಗೂ ಖಾಸಗಿ ವಲಯದ ಕಂಪನಿಗಳ ಕೊಡುಗೆಯನ್ನು ಅಜಿತ್ ಡೊಭಾಲ್ ಶ್ಲಾಘಿಸಿದರು. ‘5ಜಿ ತಂತ್ರಜ್ಞಾನವನ್ನು ಎರಡೂವರೆ ವರ್ಷಗಳಲ್ಲಿ ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದೆ. ಇದೇ ತಂತ್ರಜ್ಞಾನದ ಅಭಿವೃದ್ಧಿಗೆ ಚೀನಾ 12 ವರ್ಷ ತೆಗೆದುಕೊಂಡಿದೆ. ಇದಕ್ಕಾಗಿ 300 ಶತಕೋಟಿ ಡಾಲರ್ (ಅಂದಾಜು ₹25 ಲಕ್ಷ ಕೋಟಿ) ವೆಚ್ಚ ಮಾಡಿದೆ’ ಎಂದರು. ‘ದೇಶದ ಭದ್ರತೆ ಅಥವಾ ದತ್ತಾಂಶದ ಸುರಕ್ಷತೆಗೆ ಬಳಸುವ ಸಣ್ಣ ಸ್ಕ್ರೂ ಆದರೂ ಸರಿ ಅದು ನಂಬಲರ್ಹ ಮೂಲದಿಂದ ಬರಬೇಕು. ಇಂತಹ ಸಾಧನಗಳನ್ನು ಭಾರತದಲ್ಲಿ ತಯಾರಿಸಿರಬೇಕು ಇಲ್ಲವೇ ವಿಶ್ವಾಸಾರ್ಹ ದೇಶವು ಉತ್ಪಾದನೆ ಮಾಡಿರಬೇಕು’ ಎಂದು ಪ್ರತಿಪಾದಿಸಿದರು.
ಯುದ್ಧತಂತ್ರ ಹಾಗೂ ತಂತ್ರಜ್ಞಾನ ನಡುವಿನ ನಂಟಿಗೆ ಭಾರಿ ಮಹತ್ವ ಇದೆ. ಆಧುನಿಕ ಯುದ್ಧತಂತ್ರಗಳಿಗೆ ಅಗತ್ಯವಿರುವ ದೇಶೀಯ ತಂತ್ರಜ್ಞಾನವನ್ನು ನಾವು ಅಭಿವೃದ್ಧಿಪಡಿಸುವುದು ಅಗತ್ಯಅಜಿತ್ ಡೊಭಾಲ್ ರಾಷ್ಟ್ರೀಯ ಭದ್ರತಾ ಸಲಹೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.