
ಶಾಂಭವಿ ಪಾಠಕ್
ಪುಣೆ: ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.
ಅಜಿತ್ ಅವರ ಜತೆಗೆ ಪಿಎಸ್ಒ ಜಾಧವ್, ಒಬ್ಬ ಸಹಾಯಕ, ಇಬ್ಬರು ಪೈಲಟ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಖಚಿತಪಡಿಸಿದೆ. ಇವರಲ್ಲಿ ಒಬ್ಬ ಪೈಲಟ್ ಅನ್ನು ಕ್ಯಾಪ್ಟನ್ ಶಾಂಭವಿ ಪಾಠಕ್ ಎಂದು ಗುರುತಿಸಲಾಗಿದೆ. ಪೈಲಟ್-ಇನ್-ಕಮಾಂಡ್ ಕ್ಯಾಪ್ಟನ್ ಸುಮಿತ್ ಕಪೂರ್ ಅವರೊಂದಿಗೆ ಶಾಂಭವಿ ಸಹ ಪೈಲಟ್ ಆಗಿದ್ದರು.
ಕ್ಯಾ. ಶಾಂಭವಿ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ, ವಾಯುಪಡೆಯ ಬಾಲ ಭಾರತಿ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ನಂತರ ಮುಂಬೈ ವಿಶ್ವವಿದ್ಯಾಲಯದಿಂದ ಬಿಎಸ್‌ಸಿ, ಏರೋನಾಟಿಕ್ಸ್ / ವಾಯುಯಾನ / ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ನಂತರ ನ್ಯೂಜಿಲೆಂಡ್ ಅಂತರರಾಷ್ಟ್ರೀಯ ವಾಣಿಜ್ಯ ಪೈಲಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. 2018 ಮತ್ತು 2019ರಲ್ಲಿ ಅವರು ವಿಮಾನ ಹಾರಾಡದ ಕುರಿತಾದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿತು, ನ್ಯೂಜಿಲೆಂಡ್ ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ತಮ್ಮ ವಾಣಿಜ್ಯ ಪೈಲಟ್ ಪರವಾನಗಿಯನ್ನೂ ಪಡೆದಿದ್ದರು ಎಂದು ಎಬಿಪಿ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.
ತರಬೇತಿ ಬಳಿಕ ಭಾರತಕ್ಕೆ ಮರಳಿದ್ದ ಶಾಂಭವಿ ಅವರು, ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ವಾಣಿಜ್ಯ ಪೈಲಟ್ ಪರವಾನಗಿ ಪಡೆದಿದ್ದರು. ಕೆಲಕಾಲ ಸಹಾಯಕ ವಿಮಾನ ಬೋಧಕರಾಗಿಯೂ ಕೆಲಸ ಮಾಡಿದ್ದರು.
2022ರ ಆಗಸ್ಟ್‌ನಿಂದ ದೆಹಲಿ ಮೂಲದ ವಿಎಸ್‌ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಪೂರ್ಣ ಸಮಯದ ಪೈಲಟ್ ಆಗಿ ಕೆಲಸ ಮಾಡುತ್ತಿದ್ದರು. ಈ ಸಂಸ್ಥೆಯಲ್ಲಿ ಅವರು ವಿಐಪಿಗಳು, ಉದ್ಯಮಿಗಳು ಮತ್ತು ವಿಶೇಷ ಪ್ರಯಾಣಕ್ಕಾಗಿ ಬಳಸಲಾಗುವ ಲಿಯರ್‌ಜೆಟ್-45 ನಂತಹ ಉನ್ನತ ಕಾರ್ಯಕ್ಷಮತೆಯ ವಾಣಿಜ್ಯ ಜೆಟ್‌ಗಳಿಗೆ ಪೈಲಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.