ADVERTISEMENT

ನಿಮ್ಮ ಬಳಿ ಓಟು ಇದೆ, ನನ್ನ ಬಳಿ ಹಣ ಇದೆ; ನೀವೇನಾದರೂ… ಮತದಾರರಿಗೆ ಅಜಿತ್ ಬೆದರಿಕೆ

ಪಿಟಿಐ
Published 22 ನವೆಂಬರ್ 2025, 14:32 IST
Last Updated 22 ನವೆಂಬರ್ 2025, 14:32 IST
ಅಜಿತ್ ಪವಾರ್
ಅಜಿತ್ ಪವಾರ್   

ಪಿಟಿಐ ಚಿತ್ರ

ಪುಣೆ: ‘ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಗರಕ್ಕೆ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ;ನೀವು ತಿರಸ್ಕರಿಸಿದರೆ ನಾನೂ ನಿಮ್ಮನ್ನು ತಿರಸ್ಕರಿಸುತ್ತೇನೆ’

– ಪುಣೆಯ ಮಾಲೆಗಾಂವ್‌ನ ಮತದಾರರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ ಮಾತುಗಳಿವು.

ADVERTISEMENT

ಬಾರಾಮತಿ ತೆಹಸಿಲ್‌ನ ಮಾಲೆಗಾಂವ್ ನಗರ ಪಂಚಾಯತ್ ಚುನಾವಣೆಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಅಭ್ಯರ್ಥಿಗಳ ಪರವಾಗಿ ಶುಕ್ರವಾರ ಪ್ರಚಾರ ಮಾಡುವ ವೇಳೆ ಅವರು ಹೀಗೆ ಹೇಳಿದ್ದಾರೆ.

ಬಿಜೆಪಿ–ಎನ್‌ಸಿಪಿ–ಶಿವಸೇನಾ ಸಮ್ಮಿಶ್ರ ಸರ್ಕಾರದಲ್ಲಿ ಅಜಿತ್ ಪವಾರ್ ಹಣಕಾಸು ಸಚಿವರೂ ಹೌದು.

‘18 ಎನ್‌ಸಿಪಿ ಅಭ್ಯರ್ಥಿಗಳನ್ನು ನೀವು ಆಯ್ಕೆ ಮಾಡಿದರೆ, ಹಣಕಾಸಿನ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಭರವಸೆ ನೀಡಿದ್ದನ್ನು ಈಡೇರಿಸಲೂ ಸಿದ್ಧನಿದ್ದೇನೆ. ನೀವೇನಾದರೂ ತಿರಸ್ಕರಿಸಿದರೆ ನಾನೂ ತಿರಸ್ಕರಿಸುವೆ. ನಿಮ್ಮ ಬಳಿ ಓಟು ಇದೆ, ನನ್ನ ಬಳಿ ಹಣ ಇದೆ’ ಎಂದು ಹೇಳಿದ್ದಾರೆ.

ಪವಾರ್ ಅವರ ಈ ಮಾತುಗಳು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದು, ‘ಇದು ಮತದಾರರನ್ನು ಬೆದರಿಸುವ ತಂತ್ರ’ ಎಂದು ಶಿವಸೇನಾ (ಯುಟಿಬಿ) ನಾಯಕ ಅಂಬಾದಾಸ್ ದಾವ್ನೆ ಹೇಳಿದ್ದಾರೆ.

‘ಹಣವನ್ನು ಜನರು ಪಾವತಿ ಮಾಡುವ ತೆರಿಗೆಯಿಂದ ನೀಡಲಾಗುತ್ತಿದೆಯೇ ವಿನಾ ಅಜಿತ್ ಪವಾರ್ ಅವರ ಮನೆಯಿಂದ ಕೊಡುತ್ತಿಲ್ಲ. ಅಜಿತ್ ಪವಾರ್‌ರಂತಹ ನಾಯಕರು ಮತದಾರರನ್ನು ಬೆದರಿಸುತ್ತಿರುವಾಗ ಚುನಾವಣಾ ಆಯೋಗ ಏನು ಮಾಡುತ್ತಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ನಗರ ಪಂಚಾಯತ್ ಚುನಾವಣೆಗಳು ಡಿಸೆಂಬರ್ 2ರಂದು ನಿಗದಿಯಾಗಿದ್ದು, ಎನ್‌ಸಿಪಿ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.