ADVERTISEMENT

ಕುಟುಂಬದ ಮನವಿಗೆ ಕರಗಿದರೇ ಅಜಿತ್‌?

ಪಿಟಿಐ
Published 26 ನವೆಂಬರ್ 2019, 19:45 IST
Last Updated 26 ನವೆಂಬರ್ 2019, 19:45 IST
ಅಜಿತ್ ಪವಾರ್
ಅಜಿತ್ ಪವಾರ್   

ಮುಂಬೈ : ‘ಕುಟುಂಬದ ಸದಸ್ಯರು ಮತ್ತು ಪಕ್ಷದ ಹಿರಿಯ ನಾಯಕರ ಮನವೊಲಿಕೆಗೆ ಕರಗಿ ಅಜಿತ್‌ ಪವಾರ್‌ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸರ್ಕಾರದ ಪತನಕ್ಕೆ ಕಾರಣವಾದರು’ ಎಂದು ಎನ್‌ಸಿಪಿ ಮೂಲಗಳು ಹೇಳಿವೆ.

‘ಪಕ್ಷದ ಮುಖ್ಯಸ್ಥ ಶರದ್‌ ಪವಾರ್‌ ಅವರು ಮಂಗಳವಾರ ದೂರವಾಣಿ ಮೂಲಕ ಅಜಿತ್‌ ಅವರನ್ನು ಸಂಪರ್ಕಿಸಿ, ಬಿಜೆಪಿಯನ್ನು ಬೆಂಬಲಿಸುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಅಜಿತ್‌ ಅವರು ಸುಪ್ರಿಯಾ ಸುಳೆ ಅವರ ಪತಿ ಸದಾನಂದ ಸುಳೆ ಅವರನ್ನು ಹೋಟೆಲ್‌ ಒಂದರಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದರು. ಈ ಭೇಟಿಯ ನಂತರ ಅಜಿತ್‌, ಮುಖ್ಯಮಂತ್ರಿಯ ಅಧಿಕೃತ ನಿವಾಸ ‘ವರ್ಷಾ’ಗೆ ಹೋದರು. ಅಲ್ಲಿ ಆ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖ ನಾಯಕರ ಸಭೆ ನಡೆಯುತ್ತಿತ್ತು. ಅಲ್ಲಿಯೇ ಅವರು ರಾಜೀನಾಮೆ ಪತ್ರ ಸಲ್ಲಿಸಿ ಹೊರಬಂದರು’ ಎಂದು ಎನ್‌ಸಿಪಿ ನಾಯಕರೊಬ್ಬರು ತಿಳಿಸಿದರು.

ಬಿಜೆಪಿಯ ಜೊತೆ ಸೇರಿ ಸರ್ಕಾರ ರಚಿಸಿದ ದಿನ ದಿಂದಲೇ ಕುಟುಂಬದ ಸದಸ್ಯರು ಅಜಿತ್‌ ಪವಾರ್‌ ಅವರ ಮನವೊಲಿಕೆಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದರು. ಶರದ್‌ ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಶನಿವಾರ ಅಜಿತ್‌ ಅವರಿಗೆ ಭಾವನಾತ್ಮಕ ಸಂದೇಶವನ್ನು ಕಳುಹಿಸಿ, ಎನ್‌ಸಿಪಿಗೆ ಮರಳುವಂತೆ ಮನವಿ ಮಾಡಿದ್ದರು. ಚಿಕ್ಕಮ್ಮ (ಶರದ್‌ ಪವಾರ್‌ ಅವರ ಪತ್ನಿ) ಪ್ರತಿಭಾ ತಾಯಿ ಅವರೂ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ ಪಕ್ಷದ ಕೆಲವು ಹಿರಿಯ ಮುಖಂಡರೂ ಇಂಥ ಪ್ರಯತ್ನಗಳನ್ನು ನಡೆಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.