ADVERTISEMENT

ಅಜಿತ್‌ ಹೆಸರು ಕೆಡಿಸಲಾಗುತ್ತಿದೆ: ಶರದ್‌ ಪವಾರ್

​ಪ್ರಜಾವಾಣಿ ವಾರ್ತೆ
Published 6 ಮೇ 2023, 16:09 IST
Last Updated 6 ಮೇ 2023, 16:09 IST
ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್
ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್   

ಮುಂಬೈ: ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸು ಪಡೆಯುವ ಮೂಲಕ ತಮ್ಮ ಮುಂದಿನ ನಡೆ ಕುರಿತು ಎದ್ದಿದ್ದ ಊಹಾಪೋಹಗಳಿಗೆ ಎನ್‌ಸಿಪಿ ವರಿಷ್ಠ ಶರದ್ ಪವಾರ್ ತೆರೆ ಎಳೆದಿದ್ದರೂ, ಅಜಿತ್ ಪವಾರ್‌ ಅವರ ನಿಲುವು ಮಾತ್ರ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಶನಿವಾರ ಶರದ್‌ ಪವಾರ್ ನಡೆಸಿದ ಸುದ್ದಿಗೋಷ್ಠಿಯಿಂದ ಅಜಿತ್‌ ಪವಾರ್‌ ದೂರವೇ ಉಳಿದಿದ್ದು ಇಂತಹ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದೆ.

ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶರದ್‌ ಪವಾರ್, ‘ಅಜಿತ್‌ ಸಾಮಾನ್ಯವಾಗಿ ಪಕ್ಷದ ಮುಖಂಡರು ಹಾಗೂ ಜನರ ಜೊತೆ ಇರುತ್ತಾರೆ. ವಿನಾಕಾರಣ ಆತನ ಹೆಸರು ಕೆಡಿಸಲಾಗುತ್ತಿದೆ’ ಎಂದರು.

ADVERTISEMENT

‘ಆತ (ಅಜಿತ್‌ ಪವಾರ್) ಫಲಿತಾಂಶಕ್ಕೆ ಹೆಚ್ಚು ಗಮನ ನೀಡುವ ವ್ಯಕ್ತಿ. ಹೀಗಾಗಿ ಕಡಿಮೆ ಮಾತನಾಡುತ್ತಾನೆ. ಆತನ ಈ ಸ್ವಭಾವ ತಪ್ಪುಕಲ್ಪನೆಗೆ ಕಾರಣವಾಗುತ್ತಿದೆ’ ಎಂದರು.

‘ನಾನು ಪಕ್ಷದ ಮುಖ್ಯಸ್ಥ ಸ್ಥಾನ ತ್ಯಜಿಸಿ, ಉತ್ತರಾಧಿಕಾರಿಯನ್ನು ನೇಮಕ ಮಾಡುತ್ತೇನೆ ಎಂಬುದರ ಸುಳಿವು ಅಜಿತ್‌ಗೆ ಮಾತ್ರ ಇತ್ತು’ ಎಂದೂ ಅವರು ಪುನರುಚ್ಚರಿಸಿದರು.

‘ಸದ್ಯ ನಾವು ವಿಧಾನಸಭೆ ಹಾಗೂ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗಳ ಮೇಲೆ ಗಮನ ಕೇಂದ್ರೀಕರಿಸುತ್ತೇವೆ’ ಎಂದ ಅವರು, ‘ಸಮಾನ ಮನಸ್ಕ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನವೂ ಮುಂದುವರಿಯಲಿದೆ’ ಎಂದು ಸೂಚ್ಯವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.