ADVERTISEMENT

ನೂಪುರ್ ಶರ್ಮಾ ಶಿರಚ್ಛೇದಕ್ಕೆ ಕರೆ ಕೊಟ್ಟಿದ್ದ ಧರ್ಮಗುರು ಸೆರೆ

ಪಿಟಿಐ
Published 7 ಜುಲೈ 2022, 2:18 IST
Last Updated 7 ಜುಲೈ 2022, 2:18 IST
ಪ್ರವಾದಿ ಮಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕಾಗಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿದರೆ ತನ್ನ ಮನೆಯನ್ನು ನೀಡುವುದಾಗಿ ಹೇಳಿ ವಿಡಿಯೊ ಮಾಡಿದ್ದ ಅಜ್ಮೀರ್‌ನ ದರ್ಗಾವೊಂದರ ಧರ್ಮಗುರು, ಖಾದಿಮ್‌ ಸಲ್ಮಾನ್‌ ಚಿಸ್ತಿಯನ್ನು ಬಂಧಿಸಲಾಗಿದೆ. (ಪಿಟಿಐ ಚಿತ್ರ)
ಪ್ರವಾದಿ ಮಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕಾಗಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿದರೆ ತನ್ನ ಮನೆಯನ್ನು ನೀಡುವುದಾಗಿ ಹೇಳಿ ವಿಡಿಯೊ ಮಾಡಿದ್ದ ಅಜ್ಮೀರ್‌ನ ದರ್ಗಾವೊಂದರ ಧರ್ಮಗುರು, ಖಾದಿಮ್‌ ಸಲ್ಮಾನ್‌ ಚಿಸ್ತಿಯನ್ನು ಬಂಧಿಸಲಾಗಿದೆ. (ಪಿಟಿಐ ಚಿತ್ರ)    

ಅಜ್ಮೀರ್‌: ಪ್ರವಾದಿ ಮಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕಾಗಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿದರೆ ತನ್ನ ಮನೆಯನ್ನು ನೀಡುವುದಾಗಿ ಹೇಳಿ ವಿಡಿಯೊ ಮಾಡಿದ್ದ ಅಜ್ಮೀರ್‌ನ ದರ್ಗಾವೊಂದರ ಧರ್ಮಗುರು, ಖಾದಿಮ್‌ ಸಲ್ಮಾನ್‌ ಚಿಸ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಪೊಲೀಸ್ ವಶಕ್ಕೆ ನೀಡಲಾಗಿದೆ.

ಆದರೆ, ಆರೋಪಿಯನ್ನು ಬಂಧಿಸಿದ ದರ್ಗಾ ವೃತ್ತದ ಅಧಿಕಾರಿ ಸಂದೀಪ್ ಸಾರಸ್ವತ್ ಅವರನ್ನು ಬುಧವಾರ ರಾತ್ರಿ ವಿಡಿಯೊವೊಂದರ ಕಾರಣಕ್ಕಾಗಿ ಅವರ ಸ್ಥಾನದಿಂದ ತೆಗೆದುಹಾಕಲಾಗಿದೆ. ‘ಉನ್ಮತ್ತನಾಗಿ ನಾನು ಆ ಹೇಳಿಕೆ ನೀಡಿದ್ದೆ’ ಎಂದು ಹೇಳುವಂತೆ ಪೊಲೀಸ್‌ ಅಧಿಕಾರಿಯು ಬಂಧಿತ ಧರ್ಮಗುರುವಿಗೆ ಹೇಳುತ್ತಿರುವುದು ಆ ವಿಡಿಯೊದಲ್ಲಿತ್ತು.

ADVERTISEMENT

‘ಜೂನ್ 28 ರಂದು ಉದಯಪುರದಲ್ಲಿ ಟೇಲರ್ ಕನ್ಹಯ್ಯಾ ಲಾಲ್ ಹತ್ಯೆಗೂ ಮುನ್ನ ಖಾದಿಮ್ ಸಲ್ಮಾನ್ ಚಿಸ್ತಿ ವಿಡಿಯೊವನ್ನು ರೆಕಾರ್ಡ್‌ ಮಾಡಿದ್ದರು. ಆದರೆ, ಅದನ್ನು ಈಗ ವೈರಲ್‌ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ದರ್ಗಾ ವೃತ್ತದ ರೌಡಿಶೀಟರ್‌ ಆಗಿದ್ದ ಚಿಸ್ತಿ, ಅಮಲಿನಲ್ಲಿ ವಿಡಿಯೊ ಮಾಡಿರಬಹುದು’ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೋಮವಾರ ರಾತ್ರಿ ಅಜ್ಮೀರ್ ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

‘ಸಲ್ಮಾನ್ ಚಿಸ್ತಿ ಸಿಕ್ಕಿಬಿದ್ದಿದ್ದಾನೆ. ಆತ ದರ್ಗಾ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ರೌಡಿ ಶೀಟರ್ ಆಗಿದ್ದ’ ಎಂದು ದರ್ಗಾ ಪೊಲೀಸ್ ಠಾಣೆಯ ಮುಖ್ಯಸ್ಥ ದಲ್ಬೀರ್ ಸಿಂಗ್ ಫೌಜ್‌ದಾರ್‌ ಹೇಳಿದ್ದಾರೆ.

ಖಾದಿಮ್ ಮೊಹಲ್ಲಾದಲ್ಲಿರುವ ನಿವಾಸದಲ್ಲಿ ಚಿಸ್ತಿಯನ್ನು ಸೆರೆ ಹಿಡಿಯಲಾಯಿತು ಎಂದು ಅಜ್ಮೀರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಂಗ್ವಾನ್ ಹೇಳಿದ್ದಾರೆ.

‘ಜೂನ್ 28ಕ್ಕೂ ಮೊದಲೇ ವಿಡಿಯೊ ಮಾಡಲಾಗಿತ್ತು. ಆದರೆ, ಈಗ ಆ ವಿಡಿಯೊ ಸೋರಿಕೆಯಾಗಿದೆ’ ಎಂದು ಆತ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.