ಹರಜೋತ್ ಸಿಂಗ್ ಬೈನ್ಸ್
ಅಮೃತಸರ/ ಚಂಡೀಗಢ: ಒಂಬತ್ತನೇ ಸಿಖ್ ಗುರು ತೇಜ್ ಬಹುದ್ದೂರ್ ಅವರ 350ನೇ ಹುತಾತ್ಮ ದಿನದ ಅಂಗವಾಗಿ ನಡೆದ ಕಾರ್ಯಕ್ರಮದ ವಿವಾದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಪಂಜಾಬ್ ಸಚಿವ ಹರಜೋತ್ ಸಿಂಗ್ ಬೈನ್ಸ್ ಅವರಿಗೆ ಅಕಾಲ್ ತಖ್ತ್ ಜಾತೇದಾರ್ ಜ್ಞಾನಿ ಕುಲದೀಪ್ ಸಿಂಗ್ ಗಡಗಾಜ್ ಅವರು ಸಮನ್ಸ್ ನೀಡಿದ್ದಾರೆ.
ಆಗಸ್ಟ್ 1ರಂದು ಐವರು ‘ಸಿಂಗ್ ಸಾಹೀಬ್’ ಅವರ ಎದುರು ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದಾರೆ.
ಗುರುವಾರ ಶ್ರೀನಗರದಲ್ಲಿ ನಡೆದ ಸಭೆಯಲ್ಲಿ ಮನರಂಜನಾ ಕಾರ್ಯಕ್ರಮ ಏರ್ಪಡಿಸಿದ್ದಕ್ಕಾಗಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಮೂಲಕ ಸಿಖ್ ಧಾರ್ಮಿಕ ಮೌಲ್ಯಗಳಿಗೆ ಅಪಮಾನ ಮಾಡಲಾಗಿದೆ ಎಂದು ಅದು ದೂರಿತ್ತು. ಈ ಕಾರ್ಯಕ್ರಮವನ್ನು ಪಂಜಾಬ್ ಸರ್ಕಾರದ ಭಾಷಾ ಇಲಾಖೆ ಏರ್ಪಡಿಸಿತ್ತು. ಹೀಗಾಗಿ ಇಲಾಖೆಯ ನಿರ್ದೇಶಕ ಜಸ್ವಂತ್ ಸಿಂಗ್ ಅವರಿಗೂ ನೋಟಿಸ್ ನೀಡಲಾಗಿದೆ.
‘ಅಕಾಲ್ ತಖ್ತ್ ಎದುರು ಹಾಜರಾಗುತ್ತೇನೆ. ಆಯೋಜಕರ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ. ಸಿಖ್ ಸಮುದಾಯದ ಸಂಪುಟ ಸಚಿವನಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಶಿಕ್ಷಣ ಸಚಿವ ಬೈನ್ಸ್ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.