ನವದೆಹಲಿ: ಭಾರತದ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸುತ್ತಿರುವ ಡ್ರೋನ್ ದಾಳಿಯನ್ನು ವಿಫಲಗೊಳಿಸುವಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸ್ವದೇಶಿ ನಿರ್ಮಿತ ‘ಆಕಾಶ್’ ಕ್ಷಿಪಣಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿವೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ಪಶ್ಚಿಮ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನ ನಡೆಸಿದ ಡ್ರೋನ್ ಮತ್ತು ಶೆಲ್ ದಾಳಿಗಳನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ಸೇನೆ ಮತ್ತು ವಾಯುಪಡೆಯು ಪಾಕಿಸ್ತಾನ ಗಡಿಯಲ್ಲಿ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಮ ಶ್ರೇಣಿಯ ‘ಆಕಾಶ್’ ಕ್ಷಿಪಣಿಯು ಭೂ ಮೇಲ್ಮೈ ಮತ್ತು ಆಗಸದಿಂದ ಎದುರಾಗುವ ಯಾವುದೇ ದಾಳಿಗಳನ್ನು ವಿಫಲಗೊಳಿಸುವ ಸಾಮರ್ಥ್ಯ ಹೊಂದಿದೆ. ಜತೆಗೆ, 25 ಕಿ.ಮೀ. ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ನಾಲ್ಕು ವೈಮಾನಿಕ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
‘ಒಮ್ಮೆಗೆ ಉಡಾಯಿಸುವ ಕ್ಷಿಪಣಿ ವ್ಯವಸ್ಥೆ (ಸಿಂಗಲ್ ಫೈರಿಂಗ್ ಯುನಿಟ್) ಬಳಸಿ ಕಮಾಂಡ್ ಮೂಲಕ 25 ಕಿ.ಮೀ. ವ್ಯಾಪ್ತಿಯಲ್ಲಿ ಮೊದಲೇ ನಿಗದಿಪಡಿಸಿದ್ದ ನಾಲ್ಕು ವೈಮಾನಿಕ ಗುರಿಗಳನ್ನು ಏಕಕಾಲದಲ್ಲಿ ಭೇದಿಸುವ ಸಾಮರ್ಥ್ಯ ಆಕಾಶ್ ಕ್ಷಿಪಣಿಯದ್ದಾಗಿದೆ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಭಾರತದ ಸಶಸ್ತ್ರ ಪಡೆಗಳು ‘ಆಪರೇಷನ್ ಸಿಂಧೂರ’ದ ಮೂಲಕ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಗಡಿಯಲ್ಲಿ ಎರಡೂ ದೇಶಗಳ ನಡುವೆ ಸೇನಾ ಸಂಘರ್ಷ ತೀವ್ರಗೊಂಡಿದೆ.
‘ದೇಶದ ಪಶ್ಚಿಮ ಭಾಗದಲ್ಲಿರುವ ಭಾರತೀಯ ವಾಯುಪಡೆಯ 13 ಸೇರಿದಂತೆ ಒಟ್ಟು 15 ಸೇನಾ ನೆಲೆಗಳ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಿ ಧ್ವಂಸಗೊಳಿಸುವ ಪಾಕಿಸ್ತಾನದ ಪ್ರಯತ್ನವನ್ನು ಭಾರತೀಯ ಸಶಸ್ತ್ರ ಪಡೆಗಳು ವಿಫಲಗೊಳಿಸಿವೆ. ಪಾಕ್ ಕ್ರಿಯೆಗೆ ಪ್ರತಿದಾಳಿಯ ಮೂಲಕ ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಗೊಳಿಸಲಾಗಿದೆ’ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.