ಮಹಾಕುಂಭ ಮೇಳ
ಮಹಾಕುಂಭ ನಗರ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಫೆ.26ರಂದು ಮುಕ್ತಾಯಗೊಳ್ಳಲಿದೆ. ಆದರೆ ಅದಕ್ಕೂ ಮುನ್ನವೇ ವಿವಿಧ ಆಖಾಡಾಗಳ ಸಾಧುಗಳು ಶಿಬಿರಗಳ ಬಳಿ ಹಾಕಿದ್ದ ಧ್ವಜಗಳನ್ನು ಕೆಳಕ್ಕಿಳಿಸಿ ವಾಪಸ್ ತೆರಳುತ್ತಿದ್ದಾರೆ.
ಮಹಾಕುಂಭದಲ್ಲಿ ಕೊನೆಯ ಅಮೃತಸ್ನಾನ ವಸಂತ ಪಂಚಮಿ ದಿನ ನಡೆದಿದ್ದು, ಆಖಾಡಾ ಸಾಧುಗಳು ಕೊನೆಯ ಸಾಂಪ್ರದಾಯಿಕ ಊಟ ‘ಕಾಡಿ ಪಕೋಡಾ’ವನ್ನು ಸವಿಯಲು ಆರಂಭಿಸಿದ್ದಾರೆ. 13 ಆಖಾಡಾಗಳ ಸನ್ಯಾಸಿಗಳು (ಶಿವನ ಆರಾಧಕರು), ಬೈರಾಗಿಗಳು (ರಾಮ ಮತ್ತು ಕೃಷ್ಣನ ಅನುಯಾಯಿಗಳು), ಮತ್ತು ಉದಾಸೀನ್‌ಗಳು (ಐದು ದೇವತೆಗಳ ಭಕ್ತರು) ವಿವಿಧ ಪಂಗಡಗಳಿಗೆ ಸೇರಿದವರಿದ್ದಾರೆ.
ಬೈರಾಗಿ ಪಂಗಡದ ಪಂಚ ನಿರ್ವಾಣಿ ಆಖಾಡಾದ ಸುಮಾರು 150 ಧರ್ಮಗುರುಗಳು ಮಂಗಳವಾರ ವಾಪಸ್ ತೆರಳಿದ್ದಾರೆ. ಇನ್ನು 35 ವಿವಿಧ ಆಖಾಡಾಗಳ ಸಾಧುಗಳು ಬಾಕಿ ಉಳಿದಿದ್ದಾರೆ. ಠಾಕೂರ್ ಜಿ (ದೇವರು) ವಿಧ್ಯುಕ್ತವಾಗಿ ಸ್ಥಳಾಂತರಗೊಂಡರೆ, ಧರ್ಮ ಧ್ವಜವನ್ನು ಕೆಳಕ್ಕೆ ಇಳಿಸಲಾಗುತ್ತದೆ ಎಂದು ಸಾಧುವೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ಫೆ.7ರಿಂದ ಜುನಾ ಆಖಾಡಾದ ನಾಗಾಸಾಧುಗಳು ನಿರ್ಗಮಿಸಲಿದ್ದಾರೆ.
ಆದರೆ, ನಾಗಾಸಾಧುಗಳು ಮಹಾಶಿವರಾತ್ರಿವರೆಗೆ ಕಾಶಿಯಲ್ಲಿ ಉಳಿಯಲಿದ್ದಾರೆ. ಅಂದು ಕಾಶಿ ವಿಶ್ವನಾಥನ ಪೂಜೆಯಲ್ಲಿ ಪಾಲ್ಗೊಂಡು, ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ತಮ್ಮ ಸ್ವಸ್ಥಾನಕ್ಕೆ ಮರಳುತ್ತಾರೆ ಎಂದು ಜುನಾ ಅಖಾಡದ ಸಾಧುವೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.