ADVERTISEMENT

2024ರಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಇಲ್ಲ: ಅಖಿಲೇಶ್‌

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 13:23 IST
Last Updated 6 ಮಾರ್ಚ್ 2023, 13:23 IST
ಅಖಿಲೇಶ್‌ ಯಾದವ್
ಅಖಿಲೇಶ್‌ ಯಾದವ್   

ಲಖನೌ: 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದೊಂದಿಗೆ ಯಾವುದೇ ರೀತಿಯ ಮೈತ್ರಿ ಇಲ್ಲ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಒಕ್ಕೂಟ ರಚನೆಯ ಸಾಧ್ಯತೆಯನ್ನೂ ತಳ್ಳಿ ಹಾಕಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಅಮೇಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ ನೇತೃತ್ವದ ಮೈತ್ರಿಕೂಟ (ಎಸ್‌ಪಿ ಮತ್ತು ರಾಷ್ಟ್ರೀಯ ಲೋಕ ದಳ) ಎಲ್ಲಾ 80 ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದರು.

‘ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಮುಖ ಆಟಗಾರ ಅಲ್ಲ. ಹೀಗಾಗಿ ರಾಜ್ಯದಲ್ಲಿ‌ ಕಾಂಗ್ರೆಸ್‌ ನೇತೃತ್ವವನ್ನೂ ನಾವು ಬಯಸುವುದಿಲ್ಲ’ ಎಂದು ಹೇಳಿದರು.

ADVERTISEMENT

ಚುನಾವಣೆಯಲ್ಲಿ ಪ್ರಭಾವ ಬೀರಬಲ್ಲ ದಲಿತ ಸಮುದಾಯವನ್ನು ತಲುಪಲು ಭೀಮ್‌ ಆರ್ಮಿ ಪಕ್ಷದ ಅಧ್ಯಕ್ಷ, ದಲಿತ ನಾಯಕ ಚಂದ್ರಶೇಖರ್‌ ಅಲಿಯಾಸ್‌ ರಾವಣ ಅವರನ್ನು ಮೈತ್ರಿಯಲ್ಲಿ ಸೇರಿಸಿಕೊಳ್ಳಲು ಪಕ್ಷ ಉತ್ಸುಕವಾಗಿದೆ ಎಂದು ಎಸ್‌ಪಿ ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಎಸ್‌ಪಿ–ಆರ್‌ಎಲ್‌ಡಿ ನೇತೃತ್ವದ ಮೈತ್ರಿಕೂಟವು ಖತೌಲಿ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಜಯಗಳಿಸಿದೆ. ಇದು ಜಾಟರು, ಯಾದವರು ಮತ್ತು ಮುಸ್ಲಿಮರು ಮಾತ್ರವಲ್ಲದೆ ದಲಿತ ಹಾಗೂ ಇತರೆ ಸಮುದಾಯದವರೂ ಮೈತ್ರಿಯ ಪರವಾಗಿದ್ದಾರೆ ಎನ್ನುವುದನ್ನು ಸೂಚಿಸಿದೆ.

‘ಚಂದ್ರಶೇಖರ್‌ ಅವರು ಪಶ್ಚಿಮ ಜಿಲ್ಲೆಗಳಾದ ಸಹರನ್‌ಪುರ, ಮುಜಾಫ್ಫರ್‌ನಗರ, ಶಾಮ್ಲಿ, ಮೇರಟ್, ಬಾಗ್ಪತ್‌ ಮತ್ತಿತರ ಜಿಲ್ಲೆಗಳಲ್ಲಿ ಪ್ರಭಾವ ಬೀರಲಿದ್ದಾರೆ. ಅವರು 2024ರ ಸಾರ್ವತ್ರಿಕ ಚುನಾವಣೆ ವೇಳೆ ಮೈತ್ರಿಕೂಟದ ಪಾಲುದಾರರಾಗಲು ಒಪ್ಪಿಗೆ ನೀಡಿದ್ದಾರೆ’ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಎಸ್‌ಪಿ–ಆರ್‌ಎಲ್‌ಡಿ ಮೈತ್ರಿ ಜೊತೆ ಚಂದ್ರಶೇಖರ್‌ ಅವರ ಸೇರ್ಪಡೆಯು ಬಿಎಸ್‌ಪಿ ಮತ್ತು ಬಿಜೆಪಿಗೆ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.