ಗೋರಖ್‌ಪುರ: ಅಯೋಧ್ಯೆ ದೀಪೋತ್ಸವದ ಕುರಿತು ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ. ಅಖಿಲೇಶ್, ಶ್ರೀ ರಾಮ ಹಾಗೂ ಶ್ರೀ ಕೃಷ್ಣ ದ್ರೋಹಿ ಎಂದು ದೂರಿದ್ದಾರೆ.
ಅಯೋಧ್ಯೆಯಲ್ಲಿ ಶನಿವಾರ ನಡೆದ ವಾರ್ಷಿಕ ದೀಪೋತ್ಸವದ ವೇಳೆ ದೀಪಗಳನ್ನು ಬೆಳಗಲು ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ಅಖಿಲೇಶ್ ಟೀಕಿಸಿದ್ದರು. ಅದರ ಬೆನ್ನಲ್ಲೇ, ಬಿಜೆಪಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ, ಯೋಗಿ ಗುಡುಗಿದ್ದಾರೆ.
'ಕುಂಬಾರಿಕೆಯಲ್ಲಿ ತೊಡಗಿರುವ ಪ್ರಜಾಪತಿ ಸಮುದಾಯದವರ ನೋವನ್ನು ಅರ್ಥ ಮಾಡಿಕೊಂಡಿದ್ದರೆ ಎಸ್‌ಪಿ ನಾಯಕ ಇಂತಹ 'ಬಾಲಿಶ ಹೇಳಿಕೆ' ನೀಡುತ್ತಿರಲಿಲ್ಲ' ಎಂದು ಕಿಡಿಕಾರಿದ್ದಾರೆ. ಹಾಗೆಯೇ, 'ಕ್ರಿಸ್‌ಮಸ್ ಸಂದರ್ಭದಲ್ಲಿ ವಿಶ್ವದಾದ್ಯಂತ ಮೇಣದಬತ್ತಿ ಬೆಳಗಲಾಗುತ್ತದೆ. ಅದನ್ನು ನೋಡಿ ಕಲಿಯಲಿ' ಎಂದು ಕಿವಿ ಹಿಂಡಿದ್ದಾರೆ.
ಗೋರಖ್‌ಪುರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಯೋಗಿ, 'ವಂಶಪಾರಂಪರ್ಯವಾಗಿ ಅಧಿಕಾರವನ್ನು ಬೇಕಾದರೆ ಪಡೆಯಬಹುದು, ಜ್ಞಾನವನ್ನಲ್ಲ. ಅದಕ್ಕಾಗಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕೆಲವರಿಗೆ, ಬಾಲಿಶತನ ಜೀವನುದ್ದಕ್ಕೂ ಇರುತ್ತದೆ' ಎಂದು ಕುಟುಕಿದ್ದಾರೆ.
'ಅವರು ದೀಪಗಳನ್ನು ಬೆಳಗುವ ಅಗತ್ಯವೇನಿದೆ ಎಂದು ಕೇಳಿದ್ದಾರೆ. ಅವರಿಗೆ ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಇತರ ಹಿಂದೂ ಯಾತ್ರಾ ಸ್ಥಳಗಳ ಬಗ್ಗೆ ದ್ವೇಷವಿದೆ ಎಂದು ಇಲ್ಲಿಯವರೆಗೆ ಭಾವಿಸಿದ್ದೆವು. ಆದರೆ, ದೀಪಾವಳಿ ಆಚರಣೆಯ ಬಗ್ಗೆಯೇ ಅವರಿಗೆ ದ್ವೇಷವಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಖಿಲೇಶ್ ಅವರು ಸೈಫಾಯಿಯಲ್ಲಿ ದುರ್ಯೋಧನನ ಪ್ರತಿಮೆ ಸ್ಥಾಪಿಸುವುದಾಗಿ ಬ್ರಜ್ ತೀರ್ಥ ವಿಕಾಸ್ ಪರಿಷತ್ ರಚನೆ ಸಂದರ್ಭದಲ್ಲಿ ಹೇಳಿದ್ದರು. ಆಗ ಅವರಿಗೆ 'ನೀವು ಕಂಸನ ಪ್ರತಿಮೆಯನ್ನೂ ನಿರ್ಮಿಸಬಲ್ಲಿರಿ' ಎಂದಿದ್ದೆ. 'ನಾವು ಶ್ರೀ ಕೃಷ್ಣನ ಮಥುರಾ ಮತ್ತು ಬೃಂದಾವನವನ್ನು ಅಲಂಕರಿಸುತ್ತೇವೆ. ಏಕೆಂದರೆ, ನಮಗೆ ಅವರಲ್ಲಿ ನಂಬಿಕೆ ಇದೆ. ನಿಮಗೆ ಕಂಸ ಮತ್ತು ದುರ್ಯೋಧನ ಪ್ರೀತಿ ಪಾತ್ರರು. ನೀವು ಅವರ ಪ್ರತಿಮೆಗಳನ್ನು ನಿರ್ಮಿಸಿʼ ಎಂದು ತಿವಿದಿದ್ದಾರೆ.
'ನಿಜ ಹೇಳಬೇಕೆಂದರೆ, ಅಖಿಲೇಶ್ ಶ್ರೀ ರಾಮ ದ್ರೋಹಿ ಮಾತ್ರವಲ್ಲ, ಶ್ರೀ ಕೃಷ್ಣ ದ್ರೋಹಿಯೂ ಹೌದು. ಸನಾತನ ಧರ್ಮ ಆಚರಣೆಗಳ ವಿರೋಧಿ' ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧವೂ ಟೀಕಾಪ್ರಹಾರ ನಡೆಸಿರುವ ಯೋಗಿ, ಆ ಪಕ್ಷವು ಶ್ರೀ ರಾಮ ಮತ್ತು ಶ್ರೀ ಕೃಷ್ಣನನ್ನು ತಿರಸ್ಕರಿಸಿತ್ತು. ಆದರೆ, ಇಂದು ಶ್ರೀ ರಾಮನನ್ನು ದರ್ಶನ ಮಾಡಲು ಇಡೀ ಜಗತ್ತೇ ಅಯೋಧ್ಯೆಗೆ ಬರುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
ಮಣ್ಣಿನ ದೀಪಗಳನ್ನು ತಯಾರಿಸುವ ಪ್ರಜಾಪತಿ ಸಮುದಾಯದವರ ಪ್ರಗತಿಯನ್ನು ಕುಂದಿಸಲು ಅಖಿಲೇಶ್ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.