ADVERTISEMENT

Red Fort blast: ಸುಳ್ಳು ಪ್ರಮಾಣಪತ್ರ ಪ್ರಕಟ; ಅಲ್ ಫಲಾಹ್ ವಿವಿಗೆ NAAC ನೋಟಿಸ್

ಪಿಟಿಐ
Published 13 ನವೆಂಬರ್ 2025, 11:18 IST
Last Updated 13 ನವೆಂಬರ್ 2025, 11:18 IST
<div class="paragraphs"><p>ಫರೀದಾಬಾದ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯ</p></div>

ಫರೀದಾಬಾದ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯ

   

ಪಿಟಿಐ ಚಿತ್ರ

ನವದೆಹಲಿ: ದೆಹಲಿಯ ಕೆಂಪು ಕೋಟಿ ಬಳಿ ಸೋಮವಾರ ಸಂಜೆ ಸಂಭವಿಸಿದ ಬಾಂಬ್ ಸ್ಫೋಟದ ನಂತರ ಸುದ್ದಿಯಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯವು ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದೆ.

ADVERTISEMENT

ತನ್ನ ಅಂತರ್ಜಾಲ ತಾಣದಲ್ಲಿ ಸುಳ್ಳು ಪ್ರಮಾಣಪತ್ರ ಪ್ರಕಟಿಸಿದ್ದನ್ನು ಪತ್ತೆ ಮಾಡಿರುವ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC), ವಿವಿಗೆ ಕಾರಣ ಕೇಳಿ ಗುರುವಾರ ನೋಟಿಸ್ ಜಾರಿ ಮಾಡಿದೆ.

‘ವಿಶ್ವವಿದ್ಯಾಲಯವು ಮಾನ್ಯತೆಯನ್ನು ಪಡೆದಿಲ್ಲ ಮತ್ತು ಅದಕ್ಕಾಗಿ ಅರ್ಜಿಯನ್ನೂ ಸಲ್ಲಿಸಿಲ್ಲ. ಹೀಗಿದ್ದರೂ ತನ್ನ ಕೆಲ ಕಾಲೇಜುಗಳು ಮಾನ್ಯತೆ ಹೊಂದಿರುವುದಾಗಿ ಅಂತರ್ಜಾಲದಲ್ಲಿ ಪ್ರಕಟಿಸಿದೆ’ ಎಂದು ನ್ಯಾಕ್ ಆರೋಪಿಸಿದೆ.

‘ಅಲ್‌ ಫಲಾಹ್‌ ವಿಶ್ವವಿದ್ಯಾಲಯವು ಅಲ್ ಫಲಾಹ್ ದತ್ತಿ ಸಂಸ್ಥೆಯ ಭಾಗವಾಗಿದೆ. ಇದು ಮೂರು ಕಾಲೇಜುಗಳನ್ನು ನಿರ್ವಹಿಸುತ್ತಿದ್ದು, ಅಲ್ ಫಲಾಹ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ, ಬ್ರೌನ್ ಹಿಲ್ ಎಂಜಿನಿಯರಿಂಗ್ ಕಾಲೇಜು ಮತ್ತು ಅಲ್‌ ಫಲಾಹ್ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಇವುಗಳು ಕ್ರಮವಾಗಿ 1997, 2008 ಮತ್ತು 2006ರಿಂದ ನ್ಯಾಕ್ ಮಾನ್ಯತೆ ಹೊಂದಿದೆ ಎಂದು ಪ್ರಕಟಿಸಲಾಗಿದೆ. ಇದು ಸಂಪೂರ್ಣ ಸುಳ್ಳು ಮಾಹಿತಿಯಾಗಿದ್ದು, ಸಾರ್ವಜನಿಕರ ದಾರಿ ತಪ್ಪಿಸುವ ಕೆಲಸವಾಗಿದೆ. ಅದರಲ್ಲೂ ಪಾಲಕರು ಮತ್ತು ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವಂತಿದೆ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

‘ಇದಕ್ಕೆ ವಿಶ್ವವಿದ್ಯಾಲಯ ಸೂಕ್ತ ವಿವರಣೆ ನೀಡಬೇಕು ಮತ್ತು ತಕ್ಷಣವೇ ಅವುಗಳನ್ನು ತನ್ನ ಅಂತರ್ಜಾಲ ತಾಣ ಮತ್ತು ಇತರ ಸಾರ್ವಜನಿಕ ಪ್ರಕಟಣೆಗಳಿಂದ ತೆಗೆಯಬೇಕು’ ಎಂದಿದೆ.

‘ಅಲ್‌ ಫಲಾಹ್ ಎಂಜಿನಿಯರಿಂಗ್ ಕಾಲೇಜಿಗೆ ನೀಡಿದ್ದ ಮಾನ್ಯತೆಯು 2018ರಲ್ಲಿ ಕೊನೆಗೊಂಡಿದೆ. ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಮಾನ್ಯತೆಯು 2016ರಲ್ಲಿ ಅಂತ್ಯಗೊಂಡಿದೆ. ಹೊಸದಾಗಿ ಸಂಸ್ಥೆಯ ಮೌಲ್ಯಮಾಪನ ನಡೆಸಲು ಸಂಸ್ಥೆಯು ನ್ಯಾಕ್‌ಗೆ ಅರ್ಜಿ ಸಲ್ಲಿಸಿಲ್ಲ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಅಲ್‌ ಫಲಾಹ್ ವಿಶ್ವವಿದ್ಯಾಲಯವು ಹರಿಯಾಣ ಖಾಸಗಿ ವಿಶ್ವವಿದ್ಯಾಲಯಗಳ ಕಾಯ್ದೆಯಡಿ ಹರಿಯಾಣ ವಿಧಾನಸಭೆಯಿಂದ ಅನುಮೋದನೆ ಪಡೆದು ಆರಂಭಗೊಂಡಿದೆ. ಸಂಸ್ಥೆಯು 1997ರಲ್ಲಿ ಎಂಜಿನಿಯರಿಂಗ್ ಕಾಲೇಜನ್ನು ಪ್ರಾರಂಭಿಸಿತು. 2013ರಲ್ಲಿ ಸಂಸ್ಥೆಗೆ ಎ ಶ್ರೇಣಿ ಮಾನ್ಯತೆಯನ್ನು ನ್ಯಾಕ್ ನೀಡಿತ್ತು. 2014ರಲ್ಲಿ ಹರಿಯಾಣ ಸರ್ಕಾರವು ಸಂಸ್ಥೆಗೆ ವಿಶ್ವವಿದ್ಯಾಲಯದ ಮಾನ್ಯತೆ ನೀಡಿತ್ತು. ಅಲ್ ಫಲಾಹ್ ವೈದ್ಯಕೀಯ ಕಾಲೇಜು ಕೂಡಾ ಇದೇ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿದೆ.

ಸಂಸ್ಥೆ ಆರಂಭದ ದಿನಗಳಲ್ಲಿ ಇದನ್ನು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಪರ್ಯಾಯ ಎಂದೇ ಪರಿಗಣಿಸಲಾಗಿತ್ತು.

ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ 13 ಜನ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ದೆಹಲಿ ಕಾರು ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮೂವರು ವೈದ್ಯರ ಸಹಿತ ಎಂಟು ಸುಶಿಕ್ಷಿತರನ್ನು ಬಂಧಿಸಿದ ಬಳಿಕ ‘ವೈಟ್‌ ಕಾಲರ್‌ ಭಯೋತ್ಪಾದನೆ’ಯ ಚರ್ಚೆ ಆರಂಭವಾಗಿದೆ. ಇವರೆಲ್ಲರೂ ಅಲ್‌ ಫಲಾಹ್ ವಿಶ್ವವಿದ್ಯಾಲಯಕ್ಕೆ ಸೇರಿದವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.