ADVERTISEMENT

ಏಪ್ರಿಲ್‌ 14ರ ವರೆಗೂ ಎಲ್ಲ ಪ್ರಾದೇಶಿಕ, ಖಾಸಗಿ ವಿಮಾನಗಳ ಹಾರಾಟ ನಿಷೇಧ

ಏಜೆನ್ಸೀಸ್
Published 27 ಮಾರ್ಚ್ 2020, 11:55 IST
Last Updated 27 ಮಾರ್ಚ್ 2020, 11:55 IST
ವಿಮಾನ ಹಾರಾಟ ನಿಷೇಧ– ಸಾಂಕೇತಿಕ ಚಿತ್ರ
ವಿಮಾನ ಹಾರಾಟ ನಿಷೇಧ– ಸಾಂಕೇತಿಕ ಚಿತ್ರ   

ನವದೆಹಲಿ: ಕೊರೊನಾ ವೈರಸ್‌ ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲ ಪ್ರಾದೇಶಿಕ ಹಾಗೂ ಖಾಸಗಿ ವಿಮಾನಯಾನ ಕಾರ್ಯಾಚರಣೆಗಳನ್ನು ಏಪ್ರಿಲ್‌ 14ರ ವರೆಗೂ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದಿಂದ (ಡಿಜಿಸಿಎ) ಶುಕ್ರವಾರ ಕಾರ್ಯಾಚರಣೆ ರದ್ದುಗೊಳಿಸಿರುವುದನ್ನು ಮುಂದುವರಿಸಿದೆ. ದೇಶದಾದ್ಯಂತ ಏಪ್ರಿಲ್‌ 14ರ ವರೆಗೂ ಲಾಕ್‌ಡೌನ್‌ ಘೋಷಣೆಯಾಗಿರುವುದಾಗಿ ಡಿಜಿಸಿಎ ಈ ನಿರ್ಧಾರ ಪ್ರಕಟಿಸಿದೆ. ಅಂತರರಾಷ್ಟ್ರೀಯ ನಾಗರಿಕ ವಿಮಾನಗಳ ಹಾರಾಟ ನಿಷೇಧವನ್ನು ಇತ್ತೀಚೆಗಷ್ಟೇ ಏಪ್ರಿಲ್‌ 14ರ ವರೆಗೂ ವಿಸ್ತರಿಸಲಾಗಿದೆ. ಈ ಹಿಂದೆ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಮಾರ್ಚ್‌ 29ರ ವರೆಗೂ ಹಾಗೂ ಪ್ರಾದೇಶಿಕ ವಿಮಾನಗಳಿಗೆ ಮಾರ್ಚ್‌ 31ರ ವರೆಗೂ ನಿಷೇಧ ವಿಧಿಸಲಾಗಿತ್ತು.

'ಅಂತರರಾಷ್ಟ್ರೀಯ ನಾಗರಿಕ ವಿಮಾನಗಳ ಹಾರಾಟ ಸೇವೆಗಳನ್ನು 2020ರ ಏಪ್ರಿಲ್‌ 14, ಸಂಜೆ 6:30ರ ವರೆಗೂ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಆದರೆ, ಈ ನಿರ್ಬಂಧಗಳು ಎಲ್ಲ ಅಂತರರಾಷ್ಟ್ರೀಯ ಸರಕು ಸಾಗಣೆ (ಕಾರ್ಗೊ) ಕಾರ್ಯಾಚರಣೆಗಳಿಗೆ ಹಾಗೂ ವಿಶೇಷವಾಗಿ ಡಿಜಿಸಿಎ ಮಾನ್ಯತೆ ಪಡೆದಿರುವ ಎಲ್ಲ ವಿಮಾನಗಳಿಗೆ ಅನ್ವಯವಾಗುವುದಿಲ್ಲ' ಎಂದು ಡಿಜಿಸಿಎ ತಿಳಿಸಿದೆ.

ADVERTISEMENT

ಏರ್ ಇಂಡಿಯಾ ಸಹ ತನ್ನ ಎಲ್ಲ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಏಪ್ರಿಲ್‌ 14ರ ವರೆಗೂ ರದ್ದು ಪಡಿಸಿರುವುದಾಗಿ ಹೇಳಿಕೊಂಡಿದೆ. ಪ್ರಸ್ತುತ ಪ್ರಕಟಣೆಯ ಪ್ರಕಾರ, ಅಂತರರಾಷ್ಟ್ರೀಯ ನಾಗರಿಕ ವಿಮಾನಗಳ ಹಾರಾಟ ಕಾರ್ಯಾಚರಣೆ ಏಪ್ರಿಲ್‌ 15ರಂದು 12ರಿಂದ (ಬೆಳಗಿನ ಜಾವ) ನಡೆಸಬಹುದಾಗಿದೆ.

ಮೂಲಗಳ ಪ್ರಕಾರ, ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಸಿಂಗಾಪುರ್, ಕಾಬುಲ್‌, ಕಾಠ್ಮಂಡು, ಬಹ್ರೆನ್‌, ದೋಹಾ, ಶಾರ್ಜಾ, ಟೆಲ್‌ ಅವಿವ್, ದುಬೈ ಹಾಗೂ ಅಬು ಧಾಬಿಗಳಿಂದ ವಿಮಾನಗಳ ಹಾರಾಟ ಎಪ್ರಿಲ್‌ 14ರಿಂದ ಪುನರಾರಂಭಗೊಳ್ಳಲಿವೆ.

ಏಪ್ರಿಲ್‌ ಪೂರ್ತಿ ಕೆಲವು ಭಾಗಗಳಿಂದ ವಿಮಾನ ಹಾರಾಟವನ್ನು ನಿಷೇಧಿಸಲು ಯೋಜಿಸಲಾಗುತ್ತಿದ್ದು, ಬಹುಶಃ ಶಾಂಘೈ, ಸೋಲ್‌, ಹಾಂಕಾಂಗ್‌, ರಿಯಾದ್‌ ಸೇರಿದಂತೆ ಕೆಲವು ಪ್ರದೇಶಗಳ ವಿಮಾನಗಳಿಗೆ ನಿಷೇಧ ಮುಂದುವರಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.