ADVERTISEMENT

ಬಾರ್ಜ್‌ ದುರಂತ: ಮಹಾರಾಷ್ಟ್ರ, ಗುಜರಾತ್‌ ಕರಾವಳಿಯಲ್ಲಿ 16 ಶವ ಪತ್ತೆ

ಪಿಟಿಐ
Published 24 ಮೇ 2021, 5:34 IST
Last Updated 24 ಮೇ 2021, 5:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ತೌತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ಪಿ305 ಬಾರ್ಜ್‌ ಮತ್ತು ಟಗ್‌ ಬೋಟ್‌ ವರಪ್ರದದಲ್ಲಿ ನಾಪತ್ತೆಯಾಗಿದ್ದ 16 ಮಂದಿಯ ಶವಗಳು ಮಹಾರಾಷ್ಟ್ರ ಮತ್ತು ಗುಜರಾತ್‌ ಕರಾವಳಿಯಲ್ಲಿ ಪತ್ತೆಯಾಗಿವೆ’ ಎಂದು ಭಾರತೀಯ ನೌಕಾಪಡೆ ಸೋಮವಾರ ತಿಳಿಸಿದೆ.

‘ಮೇ 17ರಂದು ಅರಬ್ಬಿ ಸಮುದ್ರದಲ್ಲಿ 274 ಸಿಬ್ಬಂದಿ(ಪಿ305 ಬಾರ್ಜ್‌ನ 261 ಮತ್ತು ವರಪ್ರದದ 13 ಸಿಬ್ಬಂದಿ) ನಾಪತ್ತೆಯಾಗಿದ್ದರು. ಈ ಪೈಕಿ ಬಾರ್ಜ್‌ನಿಂದ 186 ಮಂದಿ ಮತ್ತು ವರಪ್ರದದಿಂದ ಇಬ್ಬರನ್ನು ರಕ್ಷಿಸಲಾಗಿತ್ತು. 70 ಮಂದಿಯ ಶವಗಳು ಸಮುದ್ರದಲ್ಲಿ ಪತ್ತೆಯಾಗಿದ್ದವು’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದರು.

‘ಇದೀಗ 274 ಸಿಬ್ಬಂದಿ ಪೈಕಿ ಬಾಕಿ ಉಳಿದಿದ್ದ 16 ಮಂದಿಯ ಶವವೂ ಪತ್ತೆಯಾಗಿದೆ. ಮಹಾರಾಷ್ಟ್ರದ ರಾಯಗಢದ ಕರಾವಳಿ ಪ್ರದೇಶದಲ್ಲಿ 8 ಮತ್ತು ಗುಜರಾತ್‌ನ ವಲ್ಸದ್ ಕರಾವಳಿ ಬಳಿ 8 ಶವಗಳು ಸಿಕ್ಕಿವೆ. ಈ ಮೂಲಕ ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ 274 ಸಿಬ್ಬಂದಿಯ ಲೆಕ್ಕಚಾರ ಸಿಕ್ಕಿವೆ. ಶವಗಳ ಗುರುತು ಪತ್ತೆ ಹಚ್ಚುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಈ ಬಗ್ಗೆ ಅಂತಿಮ ದೃಢೀಕರಣ ಬಾಕಿಯಿದೆ ’ ಎಂದು ಅವರು ತಿಳಿಸಿದರು.

ADVERTISEMENT

ಭಾನುವಾರದವರೆಗೆ ರಕ್ಷಣಾ ಪಡೆಯು 70 ಶವಗಳನ್ನು ಪತ್ತೆ ಹಚ್ಚಿವೆ. 16 ಶವಗಳು ಕರಾವಳಿ ತೀರಗಳಲ್ಲಿ ಸಿಕ್ಕಿವೆ.

‘ಗುರುತು ಚೀಟಿ, ಬ್ಯಾಚ್‌ ನಂಬರ್‌, ಗಾಯದ ಗುರುತು, ಟ್ಯಾಟೂ ಮೂಲಕ ಸಂಬಂಧಿಕರು ಮೃತದೇಹಗಳನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಈ ಮೂಲಕ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗದಿದ್ದರೆ, ಬಳಿಕ ಡಿಎನ್‌ಎ ಪರೀಕ್ಷೆ ನಡೆಸಲಾಗುವುದು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.