ADVERTISEMENT

ಇಂದು ಕೇವಲ 15 ಸೆಕೆಂಡುಗಳಲ್ಲಿ ನೆಲಸಮವಾಗಲಿವೆ ನೋಯ್ಡಾದ ಅವಳಿ ಕಟ್ಟಡಗಳು

ಪಿಟಿಐ
Published 28 ಆಗಸ್ಟ್ 2022, 1:40 IST
Last Updated 28 ಆಗಸ್ಟ್ 2022, 1:40 IST
ನೋಯ್ಡಾದ ಅವಳಿ ಕಟ್ಟಡ ಇಂದು ನೆಲಸಮ
ನೋಯ್ಡಾದ ಅವಳಿ ಕಟ್ಟಡ ಇಂದು ನೆಲಸಮ   

ನೋಯ್ಡಾ: ಇಲ್ಲಿ ಅಕ್ರಮವಾಗಿ ನಿರ್ಮಿಸಿರುವ ಸೂಪರ್‌ಟೆಕ್‌ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಇಂದು ಮಧ್ಯಾಹ್ನ ನೆಲಸಮಗೊಳಿಸಲು ಬೇಕಾಗಿರುವ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದೆ.

100 ಮೀಟರ್ ಎತ್ತರದ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮಗೊಳಿಸಲಾಗುತ್ತದೆ.

ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ನೆಲಸಮಗೊಳಿಸಲು 3,700 ಕೆ.ಜಿ ಸ್ಫೋಟಕಗಳನ್ನು ಬಳಸಲಾಗುತ್ತದೆ.

ADVERTISEMENT

ಸೆಕ್ಟರ್ 93ಎನಲ್ಲಿರುವ ಎಮರಾಲ್ಡ್ ಕೋರ್ಟ್ ಮತ್ತು ಹತ್ತಿರದ ಎಟಿಎಸ್ ವಿಲೇಜ್ ಸೊಸೈಟಿಗಳ ಸುಮಾರು 5,000 ನಿವಾಸಿಗಳು ಭಾನುವಾರ ಬೆಳಿಗ್ಗೆ 7 ಗಂಟೆಯೊಳಗೆ ಆವರಣ ಖಾಲಿ ಮಾಡುವಂತೆ ಸೂಚಿಸಲಾಗಿದೆ.

ಈ ಪೈಕಿ ಅನೇಕ ಮಂದಿ ಶನಿವಾರವೇ ಸ್ಥಳಾಂತರಗೊಂಡಿದ್ದಾರೆ. ಸುಮಾರು 3,000 ವಾಹನಗಳನ್ನು ತೆರವುಗೊಳಿಸಲಾಗುತ್ತಿದ್ದು, 200ರಷ್ಟು ಸಾಕುಪ್ರಾಣಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

ದೆಹಲಿಯ ಇತಿಹಾಸ ಪ್ರಸಿದ್ಧ ಕುತುಬ್ ಮಿನಾರ್‌ಗಿಂತಲೂ ಎತ್ತರವಾದ ಈ ಕಟ್ಟಡಗಳನ್ನು ಕೇವಲ 15 ಸೆಕೆಂಡುಗಿಂತಲೂ ಕಡಿಮೆ ಅವಧಿಯಲ್ಲಿ ವಾಟರ್‌ಫಾಲ್ ಇಂಪ್ಲೋಷನ್ ತಂತ್ರಜ್ಞಾನದ ಮೂಲಕ ನೆಲಸಮ ಮಾಡಲಾಗುತ್ತದೆ.

ಭಾರತದಲ್ಲಿ ನೆಲಸಮವಾಗಲಿರುವ ಅತ್ಯಂತ ಎತ್ತರದ ಕಟ್ಟಡ ಇದಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

ಇದರ ಕುತೂಹಲ ಎಷ್ಟೊಂದು ಮನೆ ಮಾಡಿದೆಯೆಂದರೆ ಶನಿವಾರ ಮಧ್ಯರಾತ್ರಿಯವರೆಗೂ ಹಲವಾರು ಮಂದಿ ಕಟ್ಟಡದ ಮುಂಭಾಗದಲ್ಲಿ ಸೆಲ್ಫಿ ಕ್ಲಿಕ್ಕಿಸಿ ವಿಡಿಯೊ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡುಬಂದಿತ್ತು.

ಭಾನುವಾರ ಮಧ್ಯಾಹ್ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಸುರಕ್ಷಿತವಾಗಿ ನೆಲಸಮಗೊಳಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ನೋಯ್ಡಾ ಪ್ರಾಧಿಕಾರದ ಸಿಇಎ ರಿತು ಮಹೇಶ್ವರಿ ತಿಳಿಸಿದ್ದಾರೆ.

ಅವಳಿ ಕಟ್ಟಡಗಳ ಹತ್ತಿರದಲ್ಲೇ ಅಂದರೆ ಕೇವಲ ಒಂಬತ್ತು ಮೀಟರ್ ದೂರದಲ್ಲಿ ಆಸ್ಟರ್ 2 ಹಾಗೂ ಆಸ್ಟರ್ 3 ಎಂಬ ಹೆಸರಿನ ಕಟ್ಟಡಗಳಿವೆ. ಆದರೆ ಸಮೀಪದ ಕಟ್ಟಡದ ರಚನೆಗೆ ಯಾವುದೇ ರೀತಿಯ ಹಾನಿಯಾಗದಂತೆ ನೆಲಸಮ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಮೀಪದಲ್ಲಿರುವ ನೋಯ್ಡಾ-ಗ್ರೇಟರ್ ಎಕ್ಸ್‌ಪ್ರೆಸ್‌ವೇಯಲ್ಲಿ ಮಧ್ನಾಹ್ನ 2.15ರಿಂದ 2.45ರ ವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ. ಒಂದು ನಾಟಿಕಲ್ ಮೈಲ್ ಪ್ರದೇಶದಲ್ಲಿ ವಾಯು ಮಾರ್ಗದಲ್ಲೂ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಇದನ್ನೂ ಓದಿ:

ಪೊಲೀಸರಿಂದ ಕ್ಲಿಯರನ್ಸ್ ದೊರಕಿದ ಬಳಿಕವಷ್ಟೇ ಕೇವಲ ಒಂದು ಬಟನ್ ಒತ್ತಿ ಕಟ್ಟಡವನ್ನು ನೆಲಸಮಗೊಳಿಸಲಾಗುತ್ತದೆ. ಮೂವರು ವಿದೇಶಿ ತಜ್ಞರು, ಭಾರತದ ತಜ್ಞ ಚೇತನ್ ದತ್ತಾ ಮತ್ತು ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಆರು ಜನರು ಮಾತ್ರ ಸ್ಥಳದಲ್ಲಿರಲಿದ್ದಾರೆ.

ಈ ಹಿಂದೆ ಕೇರಳದ ಕೊಚ್ಚಿಯ ಮಾರಡ್‌ನಲ್ಲಿ ಇದಕ್ಕೆ ಸಮಾನವಾಗಿ ಬಹುಮಹಡಿಯ ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.