ADVERTISEMENT

ರ‍್ಯಾಲಿ, ಸಭೆಗಳಿಲ್ಲದೇ ವಿಧಾನಸಭೆ ಚುನಾವಣೆ? ಏನು ಹೇಳಿದೆ ಅಲಹಾಬಾದ್‌ ಕೋರ್ಟ್‌?

ಚುನಾವಣೆಗಳು ಎದುರಾಗಿರುವ ರಾಜ್ಯಗಳಲ್ಲಿ ರ‍್ಯಾಲಿ, ಸಭೆ ನಿಲ್ಲಿಸಿ: ಕೇಂದ್ರಕ್ಕೆ ನ್ಯಾಯಾಲಯ ಸೂಚನೆ

ಪಿಟಿಐ
Published 24 ಡಿಸೆಂಬರ್ 2021, 2:15 IST
Last Updated 24 ಡಿಸೆಂಬರ್ 2021, 2:15 IST
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಬಿಜೆಪಿ ಸಮಾವೇಶವೊಂದಕ್ಕೆ ನಡೆಯುತ್ತಿದ್ದ ಸಿದ್ಧತೆ (ಪಿಟಿಐ)
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಬಿಜೆಪಿ ಸಮಾವೇಶವೊಂದಕ್ಕೆ ನಡೆಯುತ್ತಿದ್ದ ಸಿದ್ಧತೆ (ಪಿಟಿಐ)   

ಪ್ರಯಾಗ್‌ ರಾಜ್‌ (ಉತ್ತರ ಪ್ರದೇಶ): ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ರಾಜಕೀಯ ಸಮಾವೇಶಗಳು ನಡೆಯುವುದನ್ನು ನಿಲ್ಲಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಕೊರೊನಾ ವೈರಸ್‌ನ ರೂಪಾಂತರ ತಳಿಯಾದ ಓಮೈಕ್ರಾನ್‌ ಸೋಂಕು ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋರ್ಟ್‌ ಹೀಗೆ ಹೇಳಿದೆ.

ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ಪೀಠ, ದೇಶದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಮೂರನೇ ಅಲೆಯ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿತು.

ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಚೀನಾ, ನೆದರ್ಲೆಂಡ್‌ ಮತ್ತು ಜರ್ಮನಿಯಂಥ ದೇಶಗಳು ಸಂಪೂರ್ಣ ಅಥವಾ ಭಾಗಶಃ ಲಾಕ್‌ಡೌನ್‌ಗಳನ್ನು ವಿಧಿಸಿವೆ. ಭಾರತದಲ್ಲಿ ಎರಡನೇ ಅಲೆಯ ವೇಳೆ, ಲಕ್ಷಾಂತರ ಜನರು ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದನ್ನು ದೇಶ ಕಂಡಿದೆ. ಅನೇಕ ಜನರು ಈ ಕಾಯಿಲೆಗೆ ಪ್ರಾಣ ತೆತ್ತರು. ಉತ್ತರ ಪ್ರದೇಶ ಗ್ರಾಮ ಪಂಚಾಯಿತಿ ಚುನಾವಣೆಗಳು, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ಸೋಂಕು ಹೆಚ್ಚಳಕ್ಕೆ ಕಾರಣವಾದವು. ಹೀಗಾಗಿ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳಬೇಕಾಯಿತು,’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

ADVERTISEMENT

‘ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಎಲ್ಲಾ ರಾಜಕೀಯ ಪಕ್ಷಗಳು ಸಮಾವೇಶ, ರ‍್ಯಾಲಿ ನಡೆಸಿ ಜನರನ್ನು ಸಜ್ಜುಗೊಳಿಸುತ್ತಿವೆ. ಈ ಸಮಾವೇಶಗಳಲ್ಲಿ ಸಾಮಾಜಿಕ ಅಂತರವಾಗಲಿ, ಕೋವಿಡ್ ಮಾರ್ಗಸೂಚಿಗಳಾಗಲಿ ಪಾಲನೆಯಾಗುವುದೇ ಇಲ್ಲ,’ ಎಂದು ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.

‘ಇದನ್ನು ಸಮಯಕ್ಕೆ ಸರಿಯಾಗಿ ತಡೆಯದೇ ಹೋದರೆ, ಸಾಂಕ್ರಾಮಿಕ ರೋಗದ ಎರಡನೇ ಅಲೆಗಿಂತಲೂ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗಬಹುದು,‘ ಎಂದು ಕೋರ್ಟ್‌ ಎಚ್ಚರಿಸಿತು.

ರ‍್ಯಾಲಿ, ಸಮಾವೇಶ, ಸಭೆಗಳನ್ನು ತಕ್ಷಣವೇ ನಿಲ್ಲಿಸುವಂತೆ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಬೇಕು ಎಂದು ಭಾರತೀಯ ಚುನಾವಣಾ ಆಯೋಗವನ್ನು ಕೋರ್ಟ್‌ ವಿನಂತಿಸಿತು. ಜತೆಗೆ, ಟಿವಿ ಚಾನೆಲ್‌ಗಳು ಮತ್ತು ಪತ್ರಿಕೆಗಳ ಮೂಲಕ ಪ್ರಚಾರ ಮಾಡುವಂತೆ ರಾಜಕೀಯ ಪಕ್ಷಗಳಿಗೆ ನ್ಯಾಯಾಲಯ ಅದೇಶ ನೀಡಿತು.

ಮುಂದಿನ ವರ್ಷ ಫೆಬ್ರುವರಿಯಲ್ಲಿ ನಡೆಯಬಹುದಾದ ಚುನಾವಣೆಯನ್ನು ಸಾಧ್ಯವಾದರೆ ಒಂದೆರಡು ತಿಂಗಳು ಮುಂದೂಡಬಹುದು. ಏಕೆಂದರೆ ಜೀವ ಇದ್ದರೆ ಮಾತ್ರ ಚುನಾವಣಾ ರ‍್ಯಾಲಿ, ಸಭೆಗಳು ನಡೆಯುತ್ತವೆ. ಜನರಿಗೆ ಬದುಕುವ ಹಕ್ಕಿದೆ ಎಂದು ಅದು ಹೇಳಿತು.

ಕೋವಿಡ್-19 ಲಸಿಕೆ ಅಭಿಯಾನ ಉಲ್ಲೇಖಿಸಿದ ಕೋರ್ಟ್‌, ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿತು. ಅಲ್ಲದೇ, ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಸಮಾವೇಶ, ಸಭೆಗಳನ್ನು ನಿಲ್ಲಿಸಲು ಮತ್ತು ಚುನಾವಣೆಗಳನ್ನು ಮುಂದೂಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.