ADVERTISEMENT

ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಶೈಕ್ಷಣಿಕ ದಾಖಲೆ ನಿರಾಕರಿಸುವಂತಿಲ್ಲ: ಹೈಕೋರ್ಟ್‌

ಪಿಟಿಐ
Published 9 ನವೆಂಬರ್ 2025, 15:51 IST
Last Updated 9 ನವೆಂಬರ್ 2025, 15:51 IST
ಅಲಹಾಬಾದ್‌ ಹೈಕೋರ್ಟ್‌
ಅಲಹಾಬಾದ್‌ ಹೈಕೋರ್ಟ್‌   

ಪ್ರಯಾಗರಾಜ್‌: ಲಿಂಗ ಮತ್ತು ಹೆಸರು ಬದಲಾಯಿಸಿದ ಹೊಸ ಶೈಕ್ಷಣಿಕ ದಾಖಲೆಗಳನ್ನು ಲಿಂಗತ್ವ ಅಲ್ಪಸಂಖ್ಯಾತ ಶರದ್‌ ರೋಷನ್‌ ಸಿಂಗ್‌ ಅವರಿಗೆ ನೀಡಲು ಅಲಹಾಬಾದ್‌ ಹೈಕೋರ್ಟ್‌ ಉತ್ತರ ಪ್ರದೇಶ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ಆ ಮೂಲಕ ಲಿಂಗತ್ವ ಅಲ್ಪಸಂಖ್ಯಾತ ಜನರ ಹಕ್ಕುಗಳನ್ನು ಎತ್ತಿಹಿಡಿದಿದೆ.

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಲಿಂಗ ಬದಲಾಯಿಸಿಕೊಂಡವರಿಗೆ ಹೊಸ ದಾಖಲೆಗಳನ್ನು ನೀಡಲು ನಿರಾಕರಿಸುವಂತಿಲ್ಲ ಎಂದು ಕೋರ್ಟ್‌ ಹೇಳಿದೆ. ಶರದ್‌ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಸೌರಬ್‌ ಶ್ಯಾಮ್‌ ಈ ಬಗ್ಗೆ ಗುರುವಾರ ತೀರ್ಪು ನೀಡಿದ್ದರು.

ಹೊಸ ದಾಖಲೆಗಾಗಿ ಮನವಿ ಮಾಡುವವರಿಗೆ ಬಹಳ ವಯಸ್ಸಾದ ಮೇಲೆ ಇಂಥ ದಾಖಲೆಗಳನ್ನು ಸರಿಪಡಿಸಿಕೊಡಲು ಸರ್ಕಾರದ ಯಾವುದೇ ನಿಯಮವಿಲ್ಲ ಎಂದು ಹೇಳಿದ್ದ ಬರೇಲಿ ಮಾಧ್ಯಮಿಕ ಶೈಕ್ಷಣಿಕ ಪರಿಷತ್ತು, ಶರದ್‌ ಅವರಿಗೆ ಹೊಸ ದಾಖಲೆಗಳನ್ನು ನಿರಾಕರಿಸಿತ್ತು. ಈ ಆದೇಶವನ್ನು ಕೋರ್ಟ್‌ ತಿರಸ್ಕರಿಸಿದೆ.

ADVERTISEMENT

ಹೊಸ ದಾಖಲೆಗಳನ್ನು ನೀಡಲು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019ರ ಅನ್ವಯ ಅವಕಾಶವಿಲ್ಲ ಎಂದೂ ಶಿಕ್ಷಣ ಇಲಾಖೆ ವಾದಿಸಿತ್ತು. ಇದೇ ಕಾಯ್ದೆಯ ಅನ್ವಯ ಶರದ್‌ ಅವರನ್ನು ಲಿಂಗತ್ವ ಅಲ್ಪಸಂಖ್ಯಾತ ಎಂದು ಗುರುತಿಸಲಾಗಿದೆ.

‘ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಹಕ್ಕುಗಳ ರಕ್ಷಣೆಗೆ ಇರುವ ಕಾಯ್ದೆಯು ವಿಶೇಷವಾಗಿರುವ ಕಾಯ್ದೆಯಾಗಿದೆ. ಈ ಕಾಯ್ದೆಯು ಲಿಂಗತ್ವ ಅಲ್ಪಸಂಖ್ಯಾರಿಗೆ ಅನುಕೂಲವಾಗುವಂತೆ ಇದೆಯೇ ಹೊರತು, ಅವರ ಹಕ್ಕುಗಳನ್ನು ನಿರಾಕರಿಸುವಂತೆ ಇಲ್ಲ. ಶಿಕ್ಷಣ ಇಲಾಖೆಯು ಕಾನೂನಾತ್ಮಕವಾಗಿ ತಪ್ಪೆಸಗಿದೆ’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.