ADVERTISEMENT

ಕೋವಿಡ್‌ ಲಸಿಕೆ ಹಂಚಿಕೆ: ಕೇಂದ್ರದ ವಿರುದ್ಧ ಮಹಾರಾಷ್ಟ್ರ ಸರ್ಕಾರ ತೀವ್ರ ಆಕ್ಷೇಪ

ತಾರತಮ್ಯದ ಆರೋಪ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 19:56 IST
Last Updated 8 ಏಪ್ರಿಲ್ 2021, 19:56 IST
ಕೋವಿಡ್‌ ಲಸಿಕೆ (ಸಾಂದರ್ಭಿಕ ಚಿತ್ರ)
ಕೋವಿಡ್‌ ಲಸಿಕೆ (ಸಾಂದರ್ಭಿಕ ಚಿತ್ರ)   

ಮುಂಬೈ/ದೆಹಲಿ: ವಿವಿಧ ರಾಜ್ಯಗಳಿಗೆ ಕೋವಿಡ್‌-19 ಲಸಿಕೆ ಹಂಚಿಕೆ ಬಗ್ಗೆ ಮಹಾರಾಷ್ಟ್ರ ಸರ್ಕಾರವು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಲಸಿಕೆಯನ್ನು ಸರಿಯಾಗಿ ಪೂರೈಸಲಾಗುತ್ತಿದೆ. ಮಹಾರಾಷ್ಟ್ರಕ್ಕೆ ಪೂರೈಸುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರವು ಆರೋಪಿಸಿದೆ.

‘6 ಕೋಟಿ ಜನಸಂಖ್ಯೆ ಇರುವ ಗುಜರಾತ್‌ಗೆ ಈವರೆಗೆ 1 ಕೋಟಿ ಡೋಸ್‌ ಲಸಿಕೆ ಪೂರೈಸಲಾಗಿದೆ. ಆದರೆ 12 ಕೋಟಿ ಜನರಿರುವ ಮಹಾರಾಷ್ಟ್ರಕ್ಕೆ 1.04 ಕೋಟಿ ಡೋಸ್‌ನಷ್ಟು ಲಸಿಕೆ ಪೂರೈಕೆ ಮಾಡಲಾಗಿದೆ. ಈ ತಾರತಮ್ಯ ಏಕೆ’ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರದ ಜತೆ ನಡೆದ ವಿಡಿಯೊ ಸಂವಾದದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಎದುರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರಾಜ್ಯದ ಹಲವು ಲಸಿಕಾ ಕೇಂದ್ರಗಳು, ಲಸಿಕೆಯ ಡೋಸ್‌ ಇಲ್ಲದೆ ಬಾಗಿಲು ಹಾಕಿವೆ. ಈಗ ಕೇಂದ್ರ ಸರ್ಕಾರವು ನಮಗೆ 7.5 ಲಕ್ಷ ಡೋಸ್‌ ಲಸಿಕೆ ಪೂರೈಸಿದೆ. ಆದರೆ ಇದೇ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ 48 ಲಕ್ಷ ಡೋಸ್‌, ಮಧ್ಯಪ್ರದೇಶಕ್ಕೆ 40 ಲಕ್ಷ ಡೋಸ್‌, ಗುಜರಾತ್‌ಗೆ 30 ಲಕ್ಷ ಡೋಸ್‌ ಮತ್ತು ಹರಿಯಾಣಕ್ಕೆ 24 ಲಕ್ಷ ಡೋಸ್‌ ಲಸಿಕೆ ಪೂರೈಸಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.