ADVERTISEMENT

‘ಸ್ವಾತಂತ್ರ್ಯ ಚಳವಳಿ ಕೆಲ ಜನರು, ಕೆಲ ಪ್ರದೇಶಗಳಿಗೆ ಸೀಮಿತವಲ್ಲ’: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 14:46 IST
Last Updated 4 ಜುಲೈ 2022, 14:46 IST
ಆಂಧ್ರದ ಭೀಮಾವರಂನಲ್ಲಿ ಸೋಮವಾರ ನಡೆದ ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಂಧ್ರದ ಮುಖ್ಯಮಂತ್ರಿ ವೈ.ಎಸ್‌.ಜಗನ್ ಮೋಹನ್ ರೆಡ್ಡಿ, ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ, ರಾಜ್ಯಪಾಲ ಬಿಸ್ವಭೂಷಣ ಹರಿಚಂದನ್ ಹಾಗೂ ಇತರ ಪ್ರಮುಖರು ಭಾಗವಹಿಸಿದ್ದರು. –ಪಿಟಿಐ ಚಿತ್ರ
ಆಂಧ್ರದ ಭೀಮಾವರಂನಲ್ಲಿ ಸೋಮವಾರ ನಡೆದ ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಂಧ್ರದ ಮುಖ್ಯಮಂತ್ರಿ ವೈ.ಎಸ್‌.ಜಗನ್ ಮೋಹನ್ ರೆಡ್ಡಿ, ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ, ರಾಜ್ಯಪಾಲ ಬಿಸ್ವಭೂಷಣ ಹರಿಚಂದನ್ ಹಾಗೂ ಇತರ ಪ್ರಮುಖರು ಭಾಗವಹಿಸಿದ್ದರು. –ಪಿಟಿಐ ಚಿತ್ರ   

ಹೈದರಾಬಾದ್: ‘ದೇಶದ ಸ್ವಾತಂತ್ರ್ಯಹೋರಾಟವು ಕೆಲ ವರ್ಷಗಳು, ಕೆಲ ಪ್ರದೇಶಗಳು, ಕೆಲ ಜನರ ಇತಿಹಾಸವಲ್ಲ. ಸ್ವಾತಂತ್ರ್ಯ ಚಳವಳಿ ದೇಶದ ಎಲ್ಲ ಮೂಲೆಗಳಲ್ಲಿ ನಡೆದಿದ್ದು, ಎಲ್ಲರ ತ್ಯಾಗವು ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರತಿಪಾದಿಸಿದರು.

‘ಸ್ವಾತಂತ್ರ್ಯ ಚಳವಳಿ ಎಂಬುದು ದೇಶದ ವೈವಿಧ್ಯ, ಸಂಸ್ಕೃತಿ ಮತ್ತು ಏಕತೆಯ ಪ್ರತೀಕವಾಗಿದೆ. ತೆಲುಗು ಜನರ ಬಹುಎತ್ತರದ ನಾಯಕ ಅಲ್ಲೂರಿ (1897–1924) ಅವರು ಇಂತಹ ಸಂಸ್ಕೃತಿ, ಏಕತೆಯನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತಿದ್ದರು’ ಎಂದೂ ಮೋದಿ ಹೇಳಿದರು.

ಆಂಧ್ರದ ಭೀಮಾವರಂ ಭಾಗದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಲ್ಲೂರಿ ಅವರ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು, ಅವರ 125ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಅನಾವರಣ ಮಾಡಿ ಮೋದಿ ಮಾತನಾಡಿದರು.

ADVERTISEMENT

125ನೇ ಜನ್ಮದಿನೋತ್ಸವವೂ ಕಾಕತಾಳೀಯವೆಂಬಂತೆ ರಂಪಾ ಬಂಡಾಯದ 100ನೇ ವರ್ಷಾಚರಣೆ ಹಾಗೂ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭದಲ್ಲಿಯೇ ಬಂದಿದೆ. ಅಲ್ಲೂರಿ ಅವರು ದೇಶದ ಸಂಸ್ಕೃತಿ, ಬುಡಕಟ್ಟು ಜನರು, ಚಿಂತನೆ, ಮೌಲ್ಯಗಳ ದ್ಯೋತಕ. ಹುಟ್ಟಿನಿಂದ ಅಂತಿಮ ತ್ಯಾಗದವರೆಗೂ ಅವರ ಜೀವನ ಹೋರಾಟವು ಹಲವರಿಗೆ ಪ್ರೇರಣಾದಾಯಕವಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯದ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಬುಡಕಟ್ಟು ಜನರ ಹೆಮ್ಮೆ ಮತ್ತು ಪರಂಪರೆಗೆ ಕನ್ನಡಿ ಹಿಡಿಯಲು ಬುಡಕಟ್ಟು ಸಂಗ್ರಹಾಲಯವನ್ನು ಆಂಧ್ರದ ಲಂಬಸಿಂಗಿಯಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.