ADVERTISEMENT

370ನೇ ವಿಧಿ ರದ್ದತಿ ಸೇರಿ ಎಲ್ಲಾ ಸೈದ್ಧಾಂತಿಕ ಕಾರ್ಯಗಳು ಪೂರ್ಣಗೊಂಡಿವೆ: ಶಾ

ಪಿಟಿಐ
Published 23 ಜನವರಿ 2025, 11:22 IST
Last Updated 23 ಜನವರಿ 2025, 11:22 IST
<div class="paragraphs"><p>ಅಮಿತ್ ಶಾ </p></div>

ಅಮಿತ್ ಶಾ

   

–ಪಿಟಿಐ ಚಿತ್ರ

ಅಹಮದಾಬಾದ್: ಕಳೆದ 10 ವರ್ಷಗಳಲ್ಲಿ ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದಿರುವುದು ಸೇರಿದಂತೆ ಎಲ್ಲಾ ಸೈದ್ಧಾಂತಿಕ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪೂರ್ಣಗೊಳಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ADVERTISEMENT

ಅಹಮದಾಬಾದ್‌ನ ಗುಜರಾತ್ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆಯುತ್ತಿರುವ ‘ಹಿಂದೂ ಆಧ್ಯಾತ್ಮಿಕ ಸೇವಾ ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

‘ದೇಶದಲ್ಲಿ ಹಿಂದೂಗಳು ತಮ್ಮ ಗುರುತನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದ ಕಾಲವೊಂದಿತ್ತು. ಆದರೆ, ಕಳೆದ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಈಗ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆಯಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ತ್ರಿವಳಿ ತಲಾಖ್ ರದ್ದತಿ, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಸೇರಿದಂತೆ ಬಹುತೇಕ ಎಲ್ಲಾ ಬಾಕಿ ಕೆಲಸಗಳು ಪೂರ್ಣಗೊಂಡಿವೆ’ ಎಂದು ಹೇಳಿದ್ದಾರೆ.

‘ದೇಶದಲ್ಲಿ 70 ವರ್ಷಗಳ ಕಾಲ ಆಡಳಿತ ನಡೆಸಿದ್ದ ಯಾವುದೇ ಸರ್ಕಾರಗಳು ಜಾರಿ ಮಾಡದಂತಹ ಹಲವು ಕಾರ್ಯಕ್ರಮಗಳನ್ನು ಮೋದಿ ಅವರು ಕೇವಲ 10 ವರ್ಷಗಳಲ್ಲಿ ಅನುಷ್ಠಾನಗೊಳಿಸಿದ್ದಾರೆ. ತಮ್ಮ ಮೂರನೇ ಅಧಿಕಾರಾವಧಿಯಲ್ಲಿಯೂ ಅದೇ ಹಾದಿಯಲ್ಲಿ ಮುಂದುವರಿಯಲಿದ್ದಾರೆ’ ಎಂದು ಶಾ ತಿಳಿಸಿದ್ದಾರೆ.

‘170 ದೇಶಗಳು ಯೋಗವನ್ನು ಒಪ್ಪಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಆದೇ ರೀತಿ ಜಿ–20 ಶೃಂಗಸಭೆಯ ವೇಳೆ ಪ್ರಪಂಚದಾದ್ಯಂತದ ನಾಯಕರು ಭಾರತಕ್ಕೆ ಬಂದು ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿದ್ದರು. ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ಕಳವಾಗಿದ್ದ 350ಕ್ಕೂ ಹೆಚ್ಚು ದೇವತೆಗಳ ವಿಗ್ರಹಗಳನ್ನು ಮರಳಿ ತರುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ’ ಎಂದು ಹೇಳಿದ್ದಾರೆ.

ಹಿಂದೂ ಆಧ್ಯಾತ್ಮಿಕ ಸೇವಾ ಮೇಳದ ಕುರಿತು ಮಾತನಾಡಿದ ಶಾ, ‘ಹಿಂದೂ ದೇವಾಲಯಗಳು ಮತ್ತು ಸಂಘಟನೆಗಳು ಬುಡಕಟ್ಟು ಜನಾಂಗದವರಿಗೆ ಶಿಕ್ಷಣ ನೀಡುವುದು, ಲಕ್ಷಾಂತರ ಬಡ ನಾಗರಿಕರಿಗೆ ಆರೋಗ್ಯ ಸೇವೆ ಒದಗಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿವೆ. ಆದರೆ, ಹಿಂದೂಗಳು ತಾವು ಮಾಡಿದ ಕಾರ್ಯಕ್ರಮಗಳನ್ನು ಎಂದಿಗೂ ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ. ಸೇವಾ ಕೇಂದ್ರಿತ ಹಿಂದೂ ಸಂಘಟನೆಗಳನ್ನು ಒಂದೇ ಸೂರಿನಡಿ ತಂದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) ಧನ್ಯವಾದಗಳು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.