ADVERTISEMENT

2009ರಿಂದ 15 ಸಾವಿರ ಭಾರತೀಯರು ಅಮೆರಿಕದಿಂದ ಗಡೀಪಾರಾಗಿದ್ದಾರೆ: MEA ಜೈಶಂಕರ್

ಪಿಟಿಐ
Published 6 ಫೆಬ್ರುವರಿ 2025, 13:01 IST
Last Updated 6 ಫೆಬ್ರುವರಿ 2025, 13:01 IST
ಎಸ್. ಜೈಶಂಕರ್ 
ಎಸ್. ಜೈಶಂಕರ್    

ನವದೆಹಲಿ: ಅಕ್ರಮವಾಗಿ ನೆಲೆಸಿರುವ ಆರೋಪದಡಿ 2009ರಿಂದ ಈಚೆಗೆ 15,756 ಭಾರತೀಯರನ್ನು ಅಮೆರಿಕ ಗಡೀಪಾರು ಮಾಡಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ರಾಜ್ಯಸಭೆಗೆ ಗುರುವಾರ ಮಾಹಿತಿ ನೀಡಿದ್ದಾರೆ.

ಅಮೆರಿಕದಿಂದ ಗಡೀಪಾರಾಗಿ ಭಾರತದ ಅಮೃತಸರಕ್ಕೆ ಬಂದಿಳಿದ 104 ಭಾರತೀಯರ ಕೈ ಮತ್ತು ಕಾಲಿಗೆ ಬೇಡಿ ಹಾಕಿ ಕರೆತಂದಿದ್ದನ್ನು ಖಂಡಿಸಿ ರಾಜ್ಯಸಭೆಯಲ್ಲಿ ವಿರೋಧಪಕ್ಷಗಳು ಗುರುವಾರ ಪ್ರತಿಭಟನೆ ನಡೆಸಿದವು. ಇದಕ್ಕೆ ಉತ್ತರ ರೂಪದಲ್ಲಿ ಪ್ರತಿಕ್ರಿಯಿಸಿದ ಜೈಶಂಕರ್, ‘ಕಳೆದ ಹಲವು ವರ್ಷಗಳಿಂದ ಗಡೀಪಾರು ಪ್ರಕ್ರಿಯೆ ನಡೆಯುತ್ತಲೇ ಇದೆ’ ಎಂದಿದ್ದಾರೆ.

‘2009ರಲ್ಲಿ 734 ಭಾರತೀಯರನ್ನು ಅಮೆರಿಕ ಗಡೀಪಾರು ಮಾಡಿದೆ. 2010ರಲ್ಲಿ 799, 2011ರಲ್ಲಿ 597, 2012ರಲ್ಲಿ 530, 2013ರಲ್ಲಿ 550 ಭಾರತೀಯರು ಗಡೀಪಾರಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ವರ್ಷ 591, 2015ರಲ್ಲಿ 708, 2016ರಲ್ಲಿ 1,303, 2017ರಲ್ಲಿ 1,024 ಹಾಗೂ 2018ರಲ್ಲಿ 1,180, 2019ರಲ್ಲಿ 2,042, 2020ರಲ್ಲಿ 1,889, 2021ರಲ್ಲಿ 805, 2022ರಲ್ಲಿ 862, 2023ರಲ್ಲಿ 670, 2024ರಲ್ಲಿ 1,368 ಭಾರತೀಯರನ್ನು ಅಮೆರಿಕ ಗಡೀಪಾರು ಮಾಡಿದೆ’ ಎಂದಿದ್ದಾರೆ.

‘ತನ್ನ ರಾಷ್ಟ್ರದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ವಿಮಾನ ಮೂಲಕ ಕಳುಹಿಸಿ ಗಡೀಪಾರು ಮಾಡುವ ಪ್ರಕ್ರಿಯೆಯನ್ನು 2012ರಿಂದಲೇ ಅಮೆರಿಕ ಆರಂಭಿಸಿದೆ. ಇದಕ್ಕಾಗಿ ವ್ಯವಸ್ಥೆಯನ್ನು ರೂಪಿಸಿರುವ ಅಲ್ಲಿನ ಸರ್ಕಾರ ವಲಸೆ ಮತ್ತು ಕಸ್ಟಮ್ಸ್‌ ಜಾರಿ ಪ್ರಾಧಿಕಾರದ ಮೂಲಕ ಇದನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ’ ಎಂದಿದ್ದಾರೆ.

'ಅವರ ಕಾನೂನು ಪಾಲನೆಯಲ್ಲಿ ಕೋಳ ತೊಡಿಸುವುದು ಸೇರಿದೆ. ಆದರೆ ಮಹಿಳೆ ಮತ್ತು ಮಕ್ಕಳಿಗೆ ಬೇಡಿ ತೊಡಿಸದಂತೆ ಅಲ್ಲಿನ ಪ್ರಾಧಿಕಾರಕ್ಕೆ ತಿಳಿಸಲಾಗಿದೆ. ಪ್ರಯಾಣದ ಸಂದರ್ಭದಲ್ಲಿ ನೀರು, ಆಹಾರ, ಔಷಧ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಬೇಕು. ಶೌಚಾಲಯ ಬಳಕೆ ಸಂದರ್ಭದಲ್ಲಿ ಬೇಡಿ ತೆಗೆಯಬೇಕು ಎಂದು ಹೇಳಲಾಗಿದೆ’ ಎಂದು ಜೈಶಂಕರ್ ಹೇಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.