ADVERTISEMENT

ಕಾಂಗ್ರೆಸ್‌ನಲ್ಲಿ 'ಅಪಮಾನ'ಕ್ಕೆ ಜಾಗವಿದೆಯೇ?: ಅಮರಿಂದರ್‌ ಸಿಂಗ್

ಪಿಟಿಐ
Published 23 ಸೆಪ್ಟೆಂಬರ್ 2021, 14:58 IST
Last Updated 23 ಸೆಪ್ಟೆಂಬರ್ 2021, 14:58 IST
ಮಾಜಿ ಸಿಎಂ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌
ಮಾಜಿ ಸಿಎಂ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌   

ಚಂಡೀಗಡ: ಇತ್ತೀಚೆಗೆ ಪಂಜಾಬ್‌ ಕಾಂಗ್ರೆಸ್‌ನಲ್ಲಾದ ನಾಯಕತ್ವ ಕಿತ್ತಾಟದ ಸೂಕ್ಷ್ಮ ಬೆಳವಣಿಗೆಯ ಭಾಗವಾಗಿ ರಾಜೀನಾಮೆ ನೀಡಿದ್ದ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌, ಕಾಂಗ್ರೆಸ್‌ನಂತಹ ಹಳೆಯ ಪ್ರಧಾನ ಪಕ್ಷದಲ್ಲಿ 'ಅಪಮಾನ'ಕ್ಕೆ ಜಾಗವಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಕೋಪಕ್ಕೆ ಜಾಗವಿಲ್ಲ ಎಂದು ದಿಲ್ಲಿಯಲ್ಲಿ ಗುರುವಾರ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾತೆ ಹೇಳಿದ್ದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಅಮರಿಂದರ್‌ ಸಿಂಗ್‌, ಹಿರಿಯ ನಾಯಕನಾದ ನನ್ನನ್ನೇ ಹೀಗೆ ನಡೆಸಿಕೊಂಡರೆ, ಸಾಮಾನ್ಯ ಕಾರ್ಯಕರ್ತರ ಭವಿಷ್ಯವೇನು? ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.

'ಹೌದು, ರಾಜಕೀಯದಲ್ಲಿ ಕೋಪಕ್ಕೆ ಜಾಗವಿಲ್ಲ. ಆದರೆ ಕಾಂಗ್ರೆಸ್‌ನಂತಹ ಹಳೆಯ ಪ್ರಧಾನ ಪಕ್ಷದಲ್ಲಿ ಅವಮಾನ ಮತ್ತು ಅಪಮಾನಕ್ಕೆ ಜಾಗವಿದೆಯೇ?' ಎಂದು ಅಮರಿಂದರ್‌ ಸಿಂಗ್‌ ಪ್ರಶ್ನಿಸಿದ್ದಾರೆ.

ADVERTISEMENT

ನನ್ನಂತಹ ಹಿರಿಯ ನಾಯಕನನ್ನೇ ಹೀಗೆ ನಡೆಸಿಕೊಳ್ಳಬಹುದು ಎಂದಾದರೆ ಸಾಮಾನ್ಯ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು ಎಂಬುದೇ ಅಚ್ಚರಿಯಾಗುತ್ತದೆ ಎಂದು ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಕೇಳಿರುವುದಾಗಿ ಅಮರಿಂದರ್‌ ಸಿಂಗ್‌ ಅವರ ಮಾಧ್ಯಮ ಸಲಹೆಗಾರ ರವೀನ್‌ ಥುಕ್ರಾಲ್‌ ಟ್ವೀಟ್‌ ಮಾಡಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ 'ತನಗೆ ಅಪಮಾನವಾದಂತೆ ಅನಿಸುತ್ತಿದೆ' ಎಂದು ಬಹಿರಂಗವಾಗೇ ಹೇಳಿದ್ದರು. ಕಾಂಗ್ರೆಸ್‌ ವರಿಷ್ಠರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಅನನುಭವಿಗಳು ಎಂದಿದ್ದರು. ನವಜೋತ್‌ ಸಿಂಗ್‌ ಸಿಧು ಅವರನ್ನು ದೇಶದ್ರೋಹಿ ಮತ್ತು ಅಪಾಯಕಾರಿ ಎಂದು ಆರೋಪಿಸಿದ್ದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಿಧು ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿಯೂ ಗುಡುಗಿದ್ದರು. ಇದಕ್ಕೆ ಸಂಬಂಧಿಸಿ ಸುಪ್ರಿಯಾ ಶ್ರೀನಾತೆ ಅವರು ಕಾಂಗ್ರೆಸ್‌ನಲ್ಲಿ ಕೋಪಕ್ಕೆ ಜಾಗವಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.