ADVERTISEMENT

ಅಮರನಾಥ ಯಾತ್ರೆ: ನೋಂದಣಿಗಾಗಿ ಜಮ್ಮುವಿನಲ್ಲಿ ಸರತಿಯಲ್ಲಿ ನಿಂತ ಯಾತ್ರಿಗಳು

ಪಿಟಿಐ
Published 1 ಜುಲೈ 2025, 9:44 IST
Last Updated 1 ಜುಲೈ 2025, 9:44 IST
<div class="paragraphs"><p>ಅಮರನಾಥ ಯಾತ್ರೆಗೆ ಸಜ್ಜಾದ ಸಾಧುವೊಬ್ಬರು ತಮಗೆ ದೊರೆತ ಅನುಮತಿ ಪತ್ರ ಹಾಗೂ ಗುರುತಿನ ಚೀಟಿಯೊಂದಿಗೆ ಪೋಸು ನೀಡಿದರು</p></div>

ಅಮರನಾಥ ಯಾತ್ರೆಗೆ ಸಜ್ಜಾದ ಸಾಧುವೊಬ್ಬರು ತಮಗೆ ದೊರೆತ ಅನುಮತಿ ಪತ್ರ ಹಾಗೂ ಗುರುತಿನ ಚೀಟಿಯೊಂದಿಗೆ ಪೋಸು ನೀಡಿದರು

   

ಪಿಟಿಐ ಚಿತ್ರ

ಜಮ್ಮು: ಈ ವರ್ಷದ ಅಮರನಾಥ ಯಾತ್ರೆ ಆರಂಭಕ್ಕೆ ಕ್ಷಣಗಣನೆ ಆರಭಗೊಂಡಿದ್ದು, ದೇಶದ ವಿವಿಧ ಭಾಗಗಳಿಂದ ಬಂದಿರುವ ಯಾತ್ರಿಗಳು ಜಮ್ಮುವಿನಲ್ಲಿ ಮಂಗಳವಾರ ಸರತಿಸಾಲಿನಲ್ಲಿ ನಿಂತು ಹೆಸರು ನೋಂದಾಯಿಸಿಕೊಂಡರು.

ADVERTISEMENT

ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ ಅಮರನಾಥ ಯಾತ್ರೆಯು ಜುಲೈ 3ರಿಂದ ಆರಂಭವಾಗಲಿದೆ. ಒಟ್ಟು 38 ದಿನಗಳ ಈ ಯಾತ್ರೆಗೆ ಎರಡು ಮಾರ್ಗಗಳ ಮೂಲಕ ಯಾತ್ರಿಗಳು ಸಾಗುತ್ತಾರೆ. ಅನಂತನಾಗ್ ಜಿಲ್ಲೆಯಲ್ಲಿರುವ 48 ಕಿ.ಮೀ. ಉದ್ದದ ನುನ್ವಾನ್‌–ಪಹಲಮ್‌ ಮಾರ್ಗ ಹಾಗೂ ಗಂದೆರ್‌ಬಾಲ್‌ ಜಿಲ್ಲೆಯ 14 ಕಿ.ಮೀ. ದೂರದ ಕಡಿದಾದ ರಸ್ತೆ ಮೂಲಕ ಯಾತ್ರೆ ಕೈಗೊಳ್ಳಬಹುದಾಗಿದೆ.

‘ಜಮ್ಮು ನಗರದಲ್ಲಿ ಸ್ಥಳದಲ್ಲೇ ನೋಂದಣಿ ಆರಂಭಗೊಂಡಿದೆ. ಈಗಾಗಲೇ ಹೆಸರು ನೊಂದಾಯಿಸಿಕೊಂಡವರಿಗೆ ಇಲ್ಲಿ ಟೋಕನ್ ವಿತರಿಸಲಾಗುತ್ತದೆ. ನೋಂದಾಯಿಸದ ಭಕ್ತರಿಗೆ ಶಾಲಿಮಾರ್ ಪ್ರದೇಶದಲ್ಲಿ ಕೌಂಟರ್ ತೆರೆಯಲಾಗಿದೆ. ಸಾಧುಗಳಿಗೆ ಪುರಾನಿ ಮಂಡಿ ಬಳಿ ಇರುವ ರಾಮ ದೇಗುಲ ಸಂಕೀರ್ಣದಲ್ಲಿ ವಿಶೇಷ ನೋಂದಣಿ ಕ್ಯಾಂಪ್ ತೆರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ರಮೇಶ್ ಕುಮಾರ್ ತಿಳಿಸಿದ್ದಾರೆ.

‘ವೈಷ್ಣವಿ ಧಾಮ, ಪಂಚಾಯತ್ ಭವನ ಮತ್ತು ಮಹಾಜನ್ ಸಭಾದಲ್ಲಿ ನೋಂದಣಿ ಕಾರ್ಯ ನಡೆಯುತ್ತಿದೆ. ಸರಸ್ವತಿ ಧಾಮದಲ್ಲಿ ಟೋಕನ್ ವಿತರಿಸಲಾಗುತ್ತಿದೆ. ಈ ಕೇಂದ್ರವು ಬೆಳಿಗ್ಗೆ 7ಕ್ಕೆ ಕಾರ್ಯಾರಂಭ ಮಾಡುತ್ತದೆ. ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

‘ರಾಮ ದೇಗುಲ ಸಂಕೀರ್ಣದಲ್ಲಿ ಸುಮಾರು 300 ಸಾಧುಗಳು ಈಗಾಗಲೇ ಬಂದಿದ್ದಾರೆ. ಇವರಿಗೆ ತಂಗಲು ಮತ್ತು ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಗವತಿ ನಗರ ಬೇಸ್‌ ಕ್ಯಾಂಪ್‌ನಲ್ಲಿ ಮಂಗಳವಾರ 1,600 ಯಾತ್ರಿಗಳು ಬಂದಿದ್ದಾರೆ. ಇಲ್ಲಿಂದ ಅಮರನಾಥ ಯಾತ್ರೆಯನ್ನು ಇವರು ಆರಂಭಿಸಲಿದ್ದಾರೆ. ಹಲವು ಹಂತಗಳ ಭದ್ರತೆಯನ್ನು ಕೈಗೊಳ್ಳಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ಅಮರನಾಥ ಯಾತ್ರೆ ಕೈಗೊಳ್ಳುವವರಲ್ಲಿ ಸುಮಾರು 50 ಸಾವಿರ ಜನರಿಗೆ ಜಮ್ಮು ಸುತ್ತಮುತ್ತ ವಸತಿ ಸೌಕರ್ಯ ಕಲ್ಪಿಸಲು ಸ್ಥಳೀಯ ಆಡಳಿತ ವ್ಯವಸ್ಥೆ ಮಾಡಿದೆ. ಇದಕ್ಕಾಗಿಯೇ ಲಖನ್‌ಪುರದಿಂದ ಬನಿಹಾಲ್‌ವರೆಗೂ 106 ಲಾಡ್ಜ್‌ಗಳನ್ನು ಗುರುತಿಸಲಾಗಿದೆ. ರಾಜ್ಯಪಾಲ ಮನೋಜ್ ಸಿನ್ಹಾ ಅವರು ಭಗವತಿ ನಗರದ ಬೇಸ್‌ ಕ್ಯಾಂಪ್‌ನಲ್ಲಿ ಜುಲೈ 2ರಂದು ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜುಲೈ 3ರಿಂದ ಔಪಚಾರಿಕವಾಗಿ ಯಾತ್ರೆಯು ಕಾಶ್ಮೀರದಿಂದ ಆರಂಭವಾಗಲಿದೆ’ ಎಂದು ತಿಳಿಸಿದ್ದಾರೆ.

‘ಗುಹಾಂತರ ಹಿಮಲಿಂಗ ದರ್ಶನ ಮಾಡಲು ಅಮರನಾಥ ಯಾತ್ರೆಯನ್ನು ಒಂಬತ್ತನೇ ಬಾರಿ ಕೈಗೊಂಡಿದ್ದೇನೆ. ನೋಂದಣಿ ಸರಳವಾಗಿ ಪೂರ್ಣಗೊಂಡಿತು. ಮೊದಲ ತಂಡದಲ್ಲೇ ಯಾತ್ರೆ ಕೈಗೊಂಡು ದರ್ಶನ ಮಾಡುತ್ತಿರುವುದು ಸಂತಸ ತಂದಿದೆ’ ಎಂದು ಪಂಜಾಬ್‌ನ ಸಂತೋಖ್‌ ಸಿಂಗ್‌ ತಿಳಿಸಿದ್ದಾರೆ.

‘ಚಾರ್‌ಧಾಮ್ ಯಾತ್ರೆಯ ಉತ್ತರಾಖಂಡದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದರಿನಾಥ ಭೇಟಿ ನೀಡಿ ಅಮರನಾಥ ಯಾತ್ರೆಗೆ ಬಂದಿದ್ದೇವೆ. ನೋಂದಣಿ ಪೂರ್ಣಗೊಂಡಿದೆ. ಇದು ನನ್ನ 21ನೇ ವರ್ಷದ ಯಾತ್ರೆಯಾಗಿದೆ. ಪ್ರತಿ ವರ್ಷ ಈ ಘಳಿಗೆಗಾಗಿ ನಾನು ಕಾಯುತ್ತಿರುತ್ತೇನೆ’ ಎಂದು ಬಾಬಾ ಬರ್ಫನ್‌ಜಿ ಹೇಳಿದ್ದಾರೆ.

‘ಕೇಂದ್ರ ಸಶಸ್ತ್ರ ಮೀಸಲು ಪಡೆಯ 180 ತುಕಡಿಗಳು ಇಲ್ಲಿ ಭದ್ರತೆ ಒದಗಿಸುತ್ತಿವೆ. ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಇದು 30 ಪಟ್ಟು ಹೆಚ್ಚಳವಾಗಿದೆ. ಪ್ರತಿ ತುಕಡಿಯಲ್ಲಿ 100 ಭದ್ರತಾ ಸಿಬ್ಬಂದಿ ಇರುತ್ತಾರೆ. ಈ ವರ್ಷದ ಯಾತ್ರೆಯು ಸುಗಮವಾಗಿ ನಡೆಯಲು ಅಗತ್ಯವಿರುವ ಕ್ರಮಗಳನ್ನು ಸ್ಥಳೀಯ ಆಡಳಿತ ಕೈಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಲವು ಹಂತಗಳ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ’ ಎಂದು ಜಮ್ಮು ವಲಯದ ಐಜಿಪಿ ಭಿಮ್ ಸೆನ್ ತುಟಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.