ADVERTISEMENT

ಗಡಿ ವಿವಾದದ ನಡುವೆ ಲೇಹ್‌–ಲಡಾಕ್‌ ರಸ್ತೆ ನಿರ್ಮಾಣಕ್ಕೆ ತೆರಳಿದ 1,500 ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 16:19 IST
Last Updated 14 ಜೂನ್ 2020, 16:19 IST
ಲಡಾಕ್‌ನ ಕಣಿವೆಯಲ್ಲಿ ನಿರ್ಮಾಣಗೊಂಡಿರುವ ರಸ್ತೆಯೊಂದರ ಸಂಗ್ರಹ ಚಿತ್ರ (ಎಎಫ್‌ಪಿ)
ಲಡಾಕ್‌ನ ಕಣಿವೆಯಲ್ಲಿ ನಿರ್ಮಾಣಗೊಂಡಿರುವ ರಸ್ತೆಯೊಂದರ ಸಂಗ್ರಹ ಚಿತ್ರ (ಎಎಫ್‌ಪಿ)   

ಪಟ್ನಾ:ಲೇಹ್‌‌– ಲಡಾಖ್‌ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲು 1,500 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ವಿಶೇಷ ರೈಲಿನ ಮೂಲಕ ಜಾರ್ಖಂಡ್‌ನಿಂದ ತೆರಳಿದರು.

ಗಡಿ ರಸ್ತೆ ಸಂಸ್ಥೆಯು (ಬಿಆರ್‌ಒ) ಈ ರೈಲು ವ್ಯವಸ್ಥೆ ಮಾಡಿತ್ತು. ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ‌ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ‌

‘ಭಾರತ– ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಈ ಸಂದರ್ಭದಲ್ಲಿ ದೇಶಕ್ಕಾಗಿ ಈ ಪ್ರಯಾಣ ಬೆಳೆಸಿದ್ದೀರಿ. ನೀವು ಯಾವ ಯೋಧರಿಗೂ ಕಡಿಮೆ ಇಲ್ಲ ಎಂದು ಶ್ಲಾಘಿಸಿದ ಮುಖ್ಯಮಂತ್ರಿ, ನಿಮ್ಮ ಪ್ರಯಾಣ ಸುಖಕರವಾಗಿರಲಿ’ ಎಂದು ಹಾರೈಸಿದರು.

ADVERTISEMENT

ದೈಹಿಕವಾಗಿ ಸದೃಢವಾಗಿರುವ, ಪ್ರತಿಕೂಲ ಪರಿಸ್ಥಿತಿ ಮತ್ತು ಪ್ರತಿಕೂಲ ಹವಾಮಾನಕ್ಕೆ ಒಗ್ಗಿಕೊಂಡು ಕೆಲಸ ಮಾಡಲು ಶಕ್ತರಾಗಿರುವವರನ್ನೇ ಆಯ್ಕೆ ಮಾಡಿ ಕಳುಹಿಸಲಾಗಿದೆ.

ಈ ಕಾರ್ಮಿಕರಿಗೆ ಸೂಕ್ತ ವೇತನದ ಜೊತೆ ಇತರೆ ಸವಲತ್ತುಗಳನ್ನು ನೀಡುವ ಒಪ್ಪಂದ ಪತ್ರಕ್ಕೆ ಬಿಆರ್‌ಒ ಸಹಿ ಹಾಕಿದೆ. ಈ ಹಿಂದೆಯೂ ಈ ಕಾರ್ಮಿಕರು ಲೇಹ್‌ ಲಡಾಖ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಮಧ್ಯವರ್ತಿಗಳ ಕಾರಣದಿಂದಾಗಿ ಅವರಿಗೆ ಸರಿಯಾದ ವೇತನ ದೊರಕುತ್ತಿರಲಿಲ್ಲ.

ಮುಖ್ಯಮಂತ್ರಿಈ ಕಾರ್ಮಿಕರಿಗೆ ಉದ್ಯೋಗ ಕಾರ್ಡ್ ಮತ್ತು ಪಡಿತರ ಕಿಟ್‌ಗಳನ್ನು ವಿತರಿಸಿದರು. ಕಾರ್ಮಿಕರಿಗೆ ಈ ಹಿಂದೆ ₹ 15 ಸಾವಿರ ವೇತನ ನೀಡಲಾಗುತ್ತಿತ್ತು. ಈಗ ₹ 18,000 ಸಾವಿರಕ್ಕೆ ಏರಿಕೆ ಮಾಡಲಾಗಿದೆ.

ಲಾಕ್‌ಡೌನ್‌ನಿಂದ ಲೇಹ್– ಲಡಾಖ್‌ನಲ್ಲಿ ಸಿಲುಕಿಕೊಂಡಿದ್ದ ಈ ಕಾರ್ಮಿಕರನ್ನು ಕಳೆದ ತಿಂಗಳು ವಿಮಾನದ ಮೂಲಕ ಸರ್ಕಾರ ರಾಜ್ಯಕ್ಕೆ ಕರೆಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.