ADVERTISEMENT

ತಮಿಳುನಾಡು ವಿಧಾನಸಭಾ ಚುನಾವಣೆ: ಅಂತಿಮವಾಗದ ಡಿಎಂಕೆ-ಕಾಂಗ್ರೆಸ್ ಸೀಟು ಹಂಚಿಕೆ

ಪಿಟಿಐ
Published 5 ಮಾರ್ಚ್ 2021, 19:31 IST
Last Updated 5 ಮಾರ್ಚ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿ ಮಿತ್ರಪಕ್ಷ ಡಿಎಂಕೆ ಜತೆಗೆ ಕಾಂಗ್ರೆಸ್‌ನ ಮಾತುಕತೆ ನಿರೀಕ್ಷಿತ ಫಲ ನೀಡದಿರುವುದರಿಂದ ಕಾಂಗ್ರೆಸ್‌ಗೆ ಇರಿಸುಮುರುಸು ಉಂಟಾಗಿದೆ.

‘ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಹೆಚ್ಚಿಸುವಷ್ಟು ಸ್ಥಾನಗಳನ್ನು ಪಡೆಯಲು ನಮ್ಮ ಪ್ರಯತ್ನ ಮುಂದುವರಿಸಲಿದ್ದೇವೆ’ ಎಂದು ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಹೇಳಿದ್ದಾರೆ.

ಸೀಟು ಹಂಚಿಕೆ ವಿಚಾರವಾಗಿ ಡಿಎಂಕೆ ಮತ್ತು ಕಾಂಗ್ರೆಸ್‌ ಮಧ್ಯೆ ಭಿನ್ನಮತ ಉಂಟಾಗಿದೆ ಎಂದು ಸುದ್ದಿಯಾಗಿತ್ತು. ಇದನ್ನು ತಳ್ಳಿಹಾಕಿದ್ದ ಮೊಯಿಲಿ ಅವರು, ‘ಈ ವಿಚಾರದಲ್ಲಿ ನಮ್ಮ ಪಕ್ಷ ದೃಢ ನಿರ್ಧಾರ ಕೈಗೊಳ್ಳುವುದು. ನಮ್ಮ ಮಾತುಕತೆ ಮುಂದುವರಿಯುತ್ತದೆ. ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಲಾಗುವುದು’ ಎಂದಿದ್ದಾರೆ.

ADVERTISEMENT

‘ತಮಿಳುನಾಡಿನಲ್ಲಿ ಜಾತ್ಯತೀತ ಶಕ್ತಿಗಳೆಲ್ಲವೂ ಒಂದಾಗುವುದು ಮತ್ತು ಬಿಜೆಪಿ ನೇತೃತ್ವದ ‘ಒಡೆಯುವ’ ಶಕ್ತಿಗಳನ್ನು ಸೋಲಿಸುವುದು ಅಗತ್ಯ ಎಂಬುದನ್ನು ಡಿಎಂಕೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಒಕ್ಕೂಟ ವ್ಯವಸ್ಥೆ ಹಾಗೂ ರಾಷ್ಟ್ರೀಯತೆಯ ಮನೋಭಾವವನ್ನು ಎತ್ತಿ ಹಿಡಿಯಲು ತಮಿಳುನಾಡು ಬಲಿಷ್ಠ ವೇದಿಕೆಯಾಗಿದೆ’ ಎಂದು ಅವರು ಹೇಳಿದ್ದಾರೆ.

ಸೀಟು ಹಂಚಿಕೆ ವಿಚಾರವಾಗಿ ಈ ಹಿಂದೆ ನಡೆದ ಎರಡು ಸಭೆಗಳಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಮೈತ್ರಿಯಿಂದ ಕಾಂಗ್ರೆಸ್‌ ಹೊರಬರುವ ಸಾಧ್ಯತೆ ಇದೆ ಎಂದೂ ಹೇಳಲಾಗಿತ್ತು. ಆದರೆ ಇದನ್ನು ಪಕ್ಷದ ತಮಿಳುನಾಡು ಘಟಕದ ಮುಖ್ಯಸ್ಥ ಕೆ.ಎಸ್‌. ಅಳಗಿರಿ ತಳ್ಳಿಹಾಕಿದ್ದಾರೆ.

‘ಡಿಎಂಕೆ ಜತೆಗಿನ ಮೈತ್ರಿಯನ್ನು ಕೊನೆಗೊಳಿಸಲಾಗುವುದು ಎಂಬುದು ಮಾಧ್ಯಮ ಸೃಷ್ಟಿ. ತೃತೀಯ ರಂಗದ ಮೇಲೆ ನಮಗೆ ವಿಶ್ವಾಸವಿಲ್ಲ. ಪ್ರಸಕ್ತ ನಮ್ಮ ಪಕ್ಷದ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದೇವೆ. ಡಿಎಂಕೆ ಜತೆಗಿನ ಮಾತುಕತೆ ಮುಂದುವರಿಯುವುದು’ ಎಂದು ಅಳಗಿರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.