ಎಂ.ಕೆ ಸ್ಟಾಲಿನ್
–ಪಿಟಿಐ ಚಿತ್ರ
ದಿಂಡಿಗಲ್(ತಮಿಳುನಾಡು): ತಮಿಳುನಾಡಿನಲ್ಲಿ ಹಿಂದೂಗಳ ಹಕ್ಕುಗಳನ್ನು ಕಸಿಯಲಾಗಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಪ ಸಂಪೂರ್ಣ ಸುಳ್ಳಾಗಿದ್ದು, ಇದು ಅವರ ಘನತೆಗೆ ತಕ್ಕುದಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
ದಿಂಡಿಗಲ್‌ನಲ್ಲಿ ಸರ್ಕಾರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಡಿಎಂಕೆಯು ಎಲ್ಲ ಧರ್ಮಗಳಿಗೆ ಸೇರಿದ ಜನರ ನಂಬಿಕೆಗಳನ್ನು ಗೌರವಿಸುತ್ತದೆ. ಅವರ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಹೇಳಿದರು.
'ನಮ್ಮಂತಹ ರಾಜ್ಯದಲ್ಲಿ, ಹಿಂದೂಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಕೇಂದ್ರದ ಗೃಹ ಸಚಿವರ ಆರೋಪವು ಸಂಪೂರ್ಣವಾಗಿ ಸುಳ್ಳು ಮತ್ತು ಅವರ ಸ್ಥಾನಕ್ಕೆ ತಕ್ಕುದಲ್ಲ. ಸತ್ಯವನ್ನು ಹೇಳಬೇಕೆಂದರೆ, ಗಲಭೆ ಸೃಷ್ಟಿಸುವ ಮತ್ತು ವಿಭಜನೆ ಬಯಸುವವರ ಮನಸ್ಥಿತಿಯೇ ತಮಿಳುನಾಡಿನಲ್ಲಿ ಯಶಸ್ವಿಯಾಗಲಿಲ್ಲ’ಎಂದು ಅವರು ಹೇಳಿದ್ದಾರೆ.
ಆ ರೀತಿಯ ಘಟನೆಗಳು ಭವಿಷ್ಯದಲ್ಲಿ ಎಂದೂ ನಡೆಯುವುದಿಲ್ಲ. ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.
‘ಸ್ಟಾಲಿನ್ ಇಲ್ಲಿ ಇರುವವರೆಗೆ ಗಲಭೆ ಸೃಷ್ಟಿಸುವ ಮತ್ತು ವಿಭಜಕ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ.
ಭಾನುವಾರ ತಮಿಳುನಾಡಿನ ಪುದುಕೊಟ್ಟಾಯ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಡಿಎಂಕೆ ನಿರಂತರವಾಗಿ ಹಿಂದುತ್ವ ಮತ್ತು ಹಿಂದೂಗಳ ಭಾವನಗೆ ಅಗೌರವ ತೋರುತ್ತಿದೆ ಎಂದು ದೂಷಿಸಿದ್ದರು.
ತಮಿಳುನಾಡಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದೂ ಆರೋಪಿಸಿದ್ದ ಶಾ, ಹಿಂದೂಗಳ ಪೂಜಾ ಪದ್ಧತಿಯನ್ನು ಅವಮಾನಿಸಲಾಗುತ್ತಿದೆ. ಅಯೋಧ್ಯೆಯ ರಾಮಮಂದಿರದ ಭೂಮಿ ಪೂಜೆ ವೇಳೆ ತಮಿಳುನಾಡಿನಲ್ಲಿ ಅಘೋಷಿತ ಕರ್ಫ್ಯೂ ಹೇರಲಾಗಿತ್ತು ಎಂದು ದೂರಿದ್ದಾರೆ.
‘ಡಿಎಂಕೆಯ ಹಿರಿಯ ನಾಯಕರು ಸನಾತನ ಧರ್ಮವನ್ನು ಡೆಂಗಿ,ಮಲೇರಿಯಾ ಎಂದು ಕರೆದಿದ್ದರು. ಹಿಂದೂಗಳ ಮೆರವಣಿಗೆ ಮತ್ತು ಮೂರ್ತಿ ವಿಸರ್ಜನೆಗಳಿಗೆ ತಡೆ ವಿಧಿಸಲಾಗಿದೆ. ಹಿಂದೂಗಳ ಮೇಲೆ ದೌರ್ಜನ್ಯ ಎಸಗುವ ಮೂಲಕ ನೀವು ಸಾಂವಿಧಾನಿಕ ನೀತಿಗಳನ್ನು ಉಲ್ಲಂಘಿಸಿದ್ದೀರಿ’ಎಂದೂ ಶಾ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.