ADVERTISEMENT

ಹರಿಯಾಣದಲ್ಲಿ ಬಿಜೆಪಿ–ಜೆಜೆಪಿ ಸರ್ಕಾರ: ದುಷ್ಯಂತ್ ಚೌಟಾಲಾ ಉಪಮುಖ್ಯಮಂತ್ರಿ

ಅಮಿತ್ ಶಾ ಘೋಷಣೆ * ಬಿಜೆಪಿ ಬೆನ್ನಿಗೆ ನಿಂತ ದುಷ್ಯಂತ

ಪಿಟಿಐ
Published 25 ಅಕ್ಟೋಬರ್ 2019, 18:56 IST
Last Updated 25 ಅಕ್ಟೋಬರ್ 2019, 18:56 IST
ದುಷ್ಯಂತ್‌ ಚೌಟಾಲ, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್‌ ಶಾ ನವದೆಹಲಿಯಲ್ಲಿ ಶುಕ್ರವಾರ ರಾತ್ರಿ ಮಾಧ್ಯಮಗೋಷ್ಠಿ ನಡೆಸಿದರು
ದುಷ್ಯಂತ್‌ ಚೌಟಾಲ, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್‌ ಶಾ ನವದೆಹಲಿಯಲ್ಲಿ ಶುಕ್ರವಾರ ರಾತ್ರಿ ಮಾಧ್ಯಮಗೋಷ್ಠಿ ನಡೆಸಿದರು   

ನವದೆಹಲಿ:ಹರಿಯಾಣದಲ್ಲಿ ಜೆಜೆಪಿಯ ಜತೆಗೂಡಿ ಬಿಜೆಪಿ ಸರ್ಕಾರ ರಚಿಸಲಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಜೆಜೆಪಿ ಅಧ್ಯಕ್ಷ ದುಷ್ಯಂತ್‌ ಚೌಟಾಲ ಅವರೊಂದಿಗೆ ಶುಕ್ರವಾರ ರಾತ್ರಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

ಜೆಜೆಪಿ ಮುಖ್ಯಸ್ಥ ದುಷ್ಯಂತ್‌ ಚೌಟಾಲ ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಅವರೇ ಎರಡನೇ ಅವಧಿಗೂ ಮುಂದುವರಿಯಲಿದ್ದಾರೆ.

ಹರಿಯಾಣದಲ್ಲಿ ಬಿಜೆಪಿ 40 ಕ್ಷೇತ್ರಗಳನ್ನು ಗೆದ್ದಿದೆ. 90 ಸದಸ್ಯರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 46 ಶಾಸಕರ ಬೆಂಬಲ ಬೇಕಿದೆ. ಜೆಜೆಪಿ 10 ಸದಸ್ಯರನ್ನು ಹೊಂದಿದೆ.

ADVERTISEMENT

ಹರಿಯಾಣದಲ್ಲಿ ಸರ್ಕಾರ ರಚಿಸುವಷ್ಟು ಬಲ ತನಗೆ ದೊರೆಯುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆಯೇ ಶಾಸಕರ ಬಲ ಒಟ್ಟುಗೂಡಿಸುವ ಕೆಲಸವನ್ನು ಬಿಜೆಪಿ ಗುರುವಾರವೇ ಆರಂಭಿಸಿತ್ತು. ಹರಿಯಾಣ ಲೋಕಹಿತ ಪಕ್ಷದಿಂದ ಗೆದ್ದಿರುವ ಗೋಪಾಲ್‌ ಕಾಂಡಾ ಅವರನ್ನು ಬಿಜೆಪಿ ಸಂಸದೆ ಸುನಿತಾ ದುಗ್ಗಲ್‌ ಅವರು ಗುರುವಾರವೇ ದೆಹಲಿಗೆ ಕರೆದೊಯ್ದಿದ್ದರು. ತಮಗೆ ಐವರು ಪಕ್ಷೇತರರ ಬೆಂಬಲ ಇದೆ. ಎಲ್ಲರೂ ಬಿಜೆಪಿಗೆ ಬೇಷರತ್‌ ಬೆಂಬಲ ನೀಡುತ್ತೇವೆ ಎಂದು ಕಾಂಡಾ ಹೇಳಿದ್ದರು.

ಆದರೆ, ಅತ್ಯಾಚಾರ ಮತ್ತು ಗಗನಸಖಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಹೊತ್ತಿರುವ ಕಾಂಡಾ ಅವರ ಬೆಂಬಲದಲ್ಲಿ ಸರ್ಕಾರ ರಚಿಸುವುದಕ್ಕೆ ಬಿಜೆಪಿ ಒಳಗೆ ಮತ್ತು ಹೊರಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಇಂದು ಹಕ್ಕು ಮಂಡನೆ:ಹರಿಯಾಣದಲ್ಲಿ ಸರ್ಕಾರ ರಚನೆಯ ಹಕ್ಕನ್ನು ಬಿಜೆಪಿ ಶನಿವಾರ ಮಂಡಿಸಲಿದೆ. ಹೊಸದಾಗಿ ಆಯ್ಕೆಯಾದವರ ಸಭೆ ಚಂಡೀಗಡದಲ್ಲಿ ಶನಿವಾರ ನಡೆಯಲಿದೆ. ಬಳಿಕ, ಹಕ್ಕು ಮಂಡನೆ ಆಗಲಿದೆ ಎಂದು ಬಿಜೆಪಿಯ ಹರಿಯಾಣ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅನಿಲ್‌ ಜೈನ್‌ ತಿಳಿಸಿದ್ದಾರೆ.

ಸಮಪಾಲಿಗೆ ಒತ್ತಡ:ಬಿಜೆಪಿ– ಶಿವಸೇನಾ ಮೈತ್ರಿಕೂಟವು ಸರಳ ಬಹುಮತ ಪಡೆದಿರುವ ಮಹಾರಾಷ್ಟ್ರದಲ್ಲಿಯೇ ಸರ್ಕಾರ ರಚನೆ ಕುತೂಹಲಕರ ಘಟ್ಟದತ್ತ ಸಾಗಿದೆ. ಅಧಿಕಾರದಲ್ಲಿ ಸಮಾನ ಪಾಲು ಬೇಕು ಎಂದು ಶಿವಸೇನಾ ಚೌಕಾಸಿ ಆರಂಭಿಸಿದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ 161 ಕ್ಷೇತ್ರಗಳಲ್ಲಿ ಬಿಜೆಪಿ–ಸೇನಾ ಮೈತ್ರಿಕೂಟ ಗೆದ್ದಿದೆ. ಇಲ್ಲಿ ಸರ್ಕಾರ ರಚನೆ ಸುಲಲಿತವಾಗಿ ಆಗಬೇಕಿತ್ತು. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿಯ ಬಲ 122 ರಿಂದ 105ಕ್ಕೆ ಇಳಿದಿದೆ. ಸೇನಾದ ಸಂಖ್ಯಾ
ಬಲವೂ 63ರಿಂದ 56ಕ್ಕೆ ಇಳಿಕೆಯಾಗಿದೆ. ಹಾಗಿದ್ದರೂ ಸರ್ಕಾರ ರಚನೆಯಲ್ಲಿ ಸೇನಾ ಪಾತ್ರ ಈಗ ನಿರ್ಣಾಯಕ.

ಹಬ್ಬದ ಬಳಿಕ ‘ಮಹಾ’ ಸರ್ಕಾರ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡನೆಗೆ ಮೊದಲೇ ಅಧಿಕಾರ ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಲು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎರಡೂ ರಾಜ್ಯಗಳಲ್ಲಿ ಹೊಸ ಸರ್ಕಾರ ರಚನೆಯ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ಬಿಜೆಪಿ ಸಂಸದೀಯ ಸಮಿತಿಯು ಶಾ ಅವರಿಗೆ ನೀಡಿದೆ. ಬಿಜೆಪಿ–ಸೇನಾ ಮಾತುಕತೆ ದೀಪಾವಳಿ ಬಳಿಕವೇ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.