ADVERTISEMENT

ಅಸ್ಸಾಂಗೆ ಅಮಿತ್‌ ಶಾ; ಗೃಹ ಸಚಿವರಾದ ಬಳಿಕ ಮೊದಲ ಭೇಟಿ

ಎನ್‌ಆರ್‌ಸಿ

ಏಜೆನ್ಸೀಸ್
Published 8 ಸೆಪ್ಟೆಂಬರ್ 2019, 7:46 IST
Last Updated 8 ಸೆಪ್ಟೆಂಬರ್ 2019, 7:46 IST
ಅಮಿತ್‌ ಶಾ, ಕೇಂದ್ರ ಗೃಹ ಸಚಿವ
ಅಮಿತ್‌ ಶಾ, ಕೇಂದ್ರ ಗೃಹ ಸಚಿವ   

ಗುವಾಹಟಿ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಪಟ್ಟಿ ಬಿಡುಗಡೆಯಾದ ನಂತರದಲ್ಲಿ ಮೊದಲ ಬಾರಿಗೆ ಗೃಹ ಸಚಿವ ಅಮಿತ್‌ ಶಾ ಅಸ್ಸಾಂ ಭೇಟಿ ನೀಡುತ್ತಿದ್ದಾರೆ. ಎನ್‌ಆರ್‌ಸಿ ಪಟ್ಟಿಯಲ್ಲಿ 19 ಲಕ್ಷ ಜನರ ಹೆಸರು ಕೈಬಿಡಲಾಗಿದೆ.

ಅಕ್ರಮ ವಲಸಿಗರನ್ನು ಪತ್ತೆ ಮಾಡುವ ಸಲುವಾಗಿ ಸಿದ್ಧಪಡಿಸಲಾಗಿರುವ ಎನ್‌ಆರ್‌ಸಿ ಅಂತಿಮ ಪಟ್ಟಿ ಬಿಡುಗೆ ಬಳಿಕ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅಮಿತ್‌ ಶಾ ಅವಲೋಕಿಸಲಿದ್ದಾರೆ. ಎರಡು ದಿನಗಳ ಪ್ರವಾಸದಲ್ಲಿ ಈಶಾನ್ಯ ಪ್ರದೇಶಗಳ ಪ್ರಾಧಿಕಾರದ ಸಭೆ ಹಾಗೂ ಬಿಜೆಪಿ ನೇತೃತ್ವದ ಎಇಡಿಎ(ನಾರ್ಥ್‌ ಈಸ್ಟ್‌ ಡೆಮಾಕ್ರಟಿಕ್‌ ಅಲಿಯನ್ಸ್‌) ಮೈತ್ರಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಕೇಂದ್ರ ಗೃಹ ಸಚಿವರಾದ ನಂತರ ಅಮಿತ್‌ ಶಾ ಮೊದಲ ಬಾರಿಗೆ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅಸ್ಸಾಂನ್ನು ಮತ್ತೆ ಆರು ತಿಂಗಳ ವರೆಗೆ ‘ಪ್ರಕ್ಷುಬ್ಧ ಪ್ರದೇಶ‘ ಎಂದು ಘೋಷಿಸಲಾಗಿದೆ.

ADVERTISEMENT

ಲೋಕಸಭೆ ಚುನಾವಣೆಗೂ ಮುನ್ನ ಅಮಿತ್‌ ಶಾ ಅಕ್ರಮ ವಲಸಿಗರನ್ನು ‘ಗೆದ್ದಲು‘ ಎಂದು ಕರೆದಿದ್ದರು. ಅಕ್ರಮವಾಗಿ ನುಸುಳಿರುವವರನ್ನು ದೇಶದಿಂದ ಹೊರ ಹಾಕಲು ಪಕ್ಷ ಬದ್ಧವಾಗಿದೆ ಎಂದು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಘೋಷಿಸಿದ್ದರು.

ಎನ್‌ಆರ್‌ಸಿ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯ ಬೆಂಗಾಲಿ ಹಿಂದೂಗಳ ಹೆಸರು ಬಿಟ್ಟು ಹೋಗಿರುವ ಬಗ್ಗೆ ಹಲವು ಬಿಜೆಪಿ ಮುಖಂಡರು ಆತಂಕ ವ್ಯಕ್ತಪಡಿಸಿದ್ದರು. ದೇಶದ ನಾಗರಿಕರು ಎಂಬುದನ್ನು ಸಾಬೀತು ಪಡಿಸಲು ಸೂಕ್ತ ದಾಖಲೆಗಳನ್ನು ನೀಡಿರದ ವ್ಯಕ್ತಿಯನ್ನು ತಕ್ಷಣವೇ ಅಕ್ರಮ ವಲಸಿಗನೆಂದು ಸರ್ಕಾರ ಘೋಷಿಸುವುದಿಲ್ಲ. ಈ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.