ADVERTISEMENT

ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಕರೆಸಿಕೊಳ್ಳುವ ಹಕ್ಕಿದೆ: ಅಮಿತ್ ಶಾ

ಮಮತಾ ಬ್ಯಾನರ್ಜಿ ವಿರುದ್ಧ ಗೃಹ ಸಚಿವ ವಾಗ್ದಾಳಿ

ಪಿಟಿಐ
Published 20 ಡಿಸೆಂಬರ್ 2020, 15:30 IST
Last Updated 20 ಡಿಸೆಂಬರ್ 2020, 15:30 IST
ಅಮಿತ್ ಶಾ (ಪಿಟಿಐ ಚಿತ್ರ)
ಅಮಿತ್ ಶಾ (ಪಿಟಿಐ ಚಿತ್ರ)   

ಬೋಲ್‌ಪುರ (ಪಶ್ಚಿಮ ಬಂಗಾಳ): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅವರ ಬೆಂಬಲಿಗರು ಸಂಚರಿಸುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ನಡ್ಡಾ ಅವರಿಗೆ ಭದ್ರತೆ ಒದಗಿಸುವ ಜವಾಬ್ದಾರಿ ಹೊತ್ತಿದ್ದ ಐಪಿಎಸ್‌ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಕರೆಸಿಕೊಂಡಿರುವುದನ್ನು ಶಾ ಸಮರ್ಥಿಸಿಕೊಂಡಿದ್ದಾರೆ. ಐಪಿಎಸ್‌ ಅಧಿಕಾರಿಗಳಿಗೆ ಕೇಂದ್ರ ಸೇವೆಗೆ ವರ್ಗಾವಣೆ ಮಾಡುವ ಹಕ್ಕು ಕೇಂದ್ರ ಸರ್ಕಾರಕ್ಕಿದೆ ಎಂದು ಅವರು ಹೇಳಿದ್ದಾರೆ.

ಮಮತಾ ಸರ್ಕಾರವು ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ರಾಜ್ಯವು ಎಲ್ಲ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಕುಸಿತ ಕಾಣುತ್ತಿದೆ ಎಂದು ಶಾ ದೂರಿದ್ದಾರೆ.

ರಾಜ್ಯ ಸರ್ಕಾರದ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಬ್ಯಾನರ್ಜಿ ಮತ್ತು ಆಡಳಿತಾರೂಢ ಟಿಎಂಸಿಯು ‘ಹೊರಗಿನವ–ಒಳಗಿನವ’ ಎಂಬುದಾಗಿ ಚರ್ಚಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

‘ರಾಜ್ಯ ಸರ್ಕಾರದಲ್ಲಿ ಕರ್ತವ್ಯದಲ್ಲಿರುವ ಐಪಿಎಸ್‌ ಅಧಿಕಾರಿಗಳಿಗೆ ಕೇಂದ್ರ ಸೇವೆಗೆ ಸಮನ್ಸ್ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಅವರಿಗೆ ಏನಾದರೂ ಅನುಮಾನ ಇದ್ದಲ್ಲಿ ಅವರು ಕಾನೂನು ಪುಸ್ತಕದ ಮೊರೆ ಹೋಗಬಹುದು’ ಎಂದು ಶಾ ಹೇಳಿದ್ದಾರೆ.

ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಈ ಮಣ್ಣಿನ ಮಗನನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲಿದ್ದೇವೆ ಎಂದ ಅಮಿತ್ ಶಾ, ಮಮತಾ ಅವರಿಗೆ ಕೆಲವು ವಿಷಯಗಳು ಮರೆತಿರಬೇಕು ಅಂದುಕೊಂಡಿದ್ದೇನೆ. ಮಮತಾ ಕಾಂಗ್ರೆಸ್‌ನಲ್ಲಿದ್ದಾಗ ಅವರು ಇಂದಿರಾ ಗಾಂಧಿಯನ್ನು ಹೊರಗಿನವರು ಎಂದು ಕರೆದಿದ್ದರೇ? ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರನ್ನೂ ಹೊರಗಿನವರು ಎಂದು ಕರೆದಿದ್ದರೇ? ಒಂದು ರಾಜ್ಯದ ಜನರಿಗೆ ಇತರ ರಾಜ್ಯಗಳಿಗೆ ತೆರಳಲು ಅವಕಾಶವಿಲ್ಲದ ದೇಶವನ್ನು ರಚಿಸಲು ಅವರು ಮುಂದಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಬಾಂಗ್ಲಾದೇಶದಿಂದ ಅಕ್ರಮ ನುಸುಳುವಿಕೆ ವಿಚಾರದಲ್ಲಿಯೂ ಮಮತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಬಿಜೆಪಿ ಒಳ ನುಸುಳುವಿಕೆ ತಡೆಯಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.