ADVERTISEMENT

ಅಮಿತ್ ಶಾ ಮನಸ್ಸು ಮಾಡಿದರೆ ಬೆಳಗಾವಿ ವಿವಾದಕ್ಕೆ ಪರಿಹಾರ ಸುಲಭ: ಸಂಜಯ್ ರಾವುತ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 8:43 IST
Last Updated 19 ಜನವರಿ 2020, 8:43 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ಕೇಂದ್ರ ಸರ್ಕಾರವು ಮನಸ್ಸು ಮಾಡಿದರೆ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಆಗಾಗ ಉದ್ವಿಗ್ನತೆಯ ಕಿಡಿ ಹೊತ್ತಿಸುವ ಬೆಳಗಾವಿ ವಿವಾದವನ್ನು ಸುಲಭವಾಗಿ ಪರಿಹರಿಸಬಹುದು ಎಂದು ಶಿವಸೇನೆಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅಭಿಪ್ರಾಯಪಟ್ಟರು.

‘ಅಮಿತ್‌ ನೇತೃತ್ವದ ಕೇಂದ್ರ ಗೃಹ ಇಲಾಖೆಯು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಬಲ್ಲದು, ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಬಹುದು ಎಂದಾದರೆ ಬೆಳಗಾವಿ ಗಡಿ ವಿವಾದ ಬಗೆಹರಿಸುವುದು ಅಷ್ಟು ಕಷ್ಟವಾಗಲಾರದು. ಈ ವಿಚಾರದತ್ತ ಅಮಿತ್ ಶಾ ಗಮನ ಹರಿಸಬೇಕಷ್ಟೇ’ ಎಂದು ಅವರು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಈ ಹಿಂದಿನ ಮುಂಬೈ ಪ್ರಾಂತ್ಯದಲ್ಲಿದ್ದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಮಹಾರಾಷ್ಟ್ರ ಹೇಳುತ್ತಿದೆ. ಇದೇ ಕಾರಣಕ್ಕೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವುದು ಅದರ ಒತ್ತಾಯ.

ADVERTISEMENT

‘ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಗಡಿ ವಿವಾದ ಕೇವಲ ತುಂಡು ಭೂಮಿಗಾಗಿ ಮಾರ್ತವೇ ಅಲ್ಲ. ಇದರಲ್ಲಿ ಮರಾಠಿ ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸುವ ಹೋರಾಟವೂ ಅಡಗಿದೆ’ ಎಂದು ಹೇಳಿದರು.

‘ಲಕ್ಷಾಂತರ ಮರಾಠಿ ಭಾಷಿಕರು ಬೆಳಗಾವಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಭಿನ್ನಮತ ಬದಿಗಿಟ್ಟು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಪರಸ್ಪರ ಚರ್ಚಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ಎಂದು ವಿನಂತಿಸಿದರು.

ಮಹಾರಾಷ್ಟ್ರ ಸರ್ಕಾರವು ಮಾರ್ಚ್ 2006ರಲ್ಲಿ ಬೆಳಗಾವಿಯ ಮೇಲೆ ಹಕ್ಕು ಸಾಧಿಸಲು ಸುಪ್ರೀಂ ಕೋರ್ಟ್‌ ಮೊರೆ ಹೋಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ತೀರ್ಪು ಹೊರಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.