ADVERTISEMENT

ವಲಸಿಗರು, ಪ್ರವಾಹದಿಂದ ಅಸ್ಸಾಂ ರಕ್ಷಿಸುತ್ತೇವೆ: ಅಮಿತ್ ಶಾ

ಪಿಟಿಐ
Published 22 ಮಾರ್ಚ್ 2021, 19:12 IST
Last Updated 22 ಮಾರ್ಚ್ 2021, 19:12 IST
ಮಜೂಲಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಅಸ್ಸಾಂ ಘಟಕದ ಅಧ್ಯಕ್ಷ ರಂಜಿತ್ ಕುಮಾರ್‌ ದಾಸ್, ಕೇಂದ್ರ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಪಿಟಿಐ ಚಿತ್ರ
ಮಜೂಲಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಅಸ್ಸಾಂ ಘಟಕದ ಅಧ್ಯಕ್ಷ ರಂಜಿತ್ ಕುಮಾರ್‌ ದಾಸ್, ಕೇಂದ್ರ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಪಿಟಿಐ ಚಿತ್ರ   

ಮಾಜುಲಿ/ಜೊನಾಯಿ: ‘ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ನೆಲವನ್ನು ಅಕ್ರಮ ವಲಸಿಗರು ಒತ್ತುವರಿ ಮಾಡಿಕೊಂಡಿದ್ದರು. ಆ ಒತ್ತುವರಿಯನ್ನು ಬಿಜೆಪಿ ತೆರವು ಮಾಡಿದೆ. ಒಳನುಸುಳುವಿಕೆ ಮತ್ತು ಪ್ರವಾಹದ ಅಪಾಯಗಳಿಂದ ಅಸ್ಸಾಂ ಅನ್ನು ಬಿಜೆಪಿ ಮಾತ್ರವೇ ಕಾಪಾಡಬಲ್ಲದು’ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ‘ನನ್ನ ಹೆಲಿಕಾಪ್ಟರ್ ಇಂದು ಬೊರ್ದೂವಾದಲ್ಲಿ ಲ್ಯಾಂಡ್ ಆಗಿದೆ. ಲ್ಯಾಂಡ್ ಆಗುವ ಮುನ್ನ ನಮ್ಮ ಅಧಿಕಾರಿಗಳನ್ನು, ಹೆಲಿಪ್ಯಾಡ್ ಎಲ್ಲಿದೆ ಎಂದು ಕೇಳಿದ್ದೆ. ಅವರು, ಈ ಹಿಂದೆ ಒತ್ತುವರಿಯಾಗಿದ್ದ ಜಾಗದಲ್ಲಿ ಈಗ ಹೆಲಿಪ್ಯಾಡ್‌ ಇದೆ ಎಂದು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಈ ಒತ್ತುವರಿಗಳನ್ನು ತೆರವು ಮಾಡಲಾಗಿದೆ ಎಂದು ಶಾ ಹೇಳಿದ್ದಾರೆ.

‘ಕಾಜೀರಂಗ ಅಭಯಾರಣ್ಯದಲ್ಲಿ ನುಸುಳುಕೋರರು ಮತ್ತು ಅಕ್ರಮ ವಲಸಿಗರು ನೆಲವನ್ನು ಒತ್ತುವರಿ ಮಾಡಿಕೊಳ್ಳಲು ಕಾಂಗ್ರೆಸ್ ಮತ್ತು ಎಐಯುಡಿಎಫ್‌ ಅವಕಾಶ ಮಾಡಿಕೊಟ್ಟಿದ್ದವು. ನಾವು ಅದನ್ನು ತೆರವು ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ರಾಜ್ಯದ ಎಲ್ಲೆಡೆ ಉಗ್ರರ ದಾಳಿ, ಗಲಭೆ, ಸಂಘರ್ಷ ನಡೆಯುತ್ತಿತ್ತು. ಇವೆಲ್ಲವನ್ನು ನಿಲ್ಲಿಸುತ್ತೇವೆ ಎಂದು 2016ರ ಚುನಾವಣೆ ಸಂದರ್ಭದಲ್ಲಿ ಹೇಳಿದ್ದೆ. ಈಗ ಅಸ್ಸಾಂ ಉಗ್ರರ ದಾಳಿ, ಗಲಭೆ ಮತ್ತು ಸಂಘರ್ಷಗಳಿಂದ ಮುಕ್ತವಾಗಿದೆ. ರಾಜ್ಯವು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಅಸ್ಸಾಂ ಅನ್ನು ಪ್ರವಾಹಮುಕ್ತ ರಾಜ್ಯವನ್ನಾಗಿ ಮಾಡುವ ಯೋಜನೆ ಪ್ರಗತಿಯಲ್ಲಿ ಇದೆ. ಅಸ್ಸಾಂನ ನೀರಿನ ಮೂಲಗಳ ಉಪಗ್ರಹ ನಕ್ಷೆಗಳನ್ನು ತಯಾರಿಸುತ್ತಿದ್ದೇವೆ. ಪ್ರವಾಹದ ನೀರನ್ನು ಸಂಗ್ರಹಿಸುತ್ತೇವೆ. ಆ ಮೂಲಕ ಅಸ್ಸಾಂ ಅನ್ನು ಪ್ರವಾಹ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ’ ಎಂದು ಅಮಿತ್ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.