ADVERTISEMENT

ಭಾರತೀಯ ಭಾಷೆಗಳಿಗೆ ಪ್ರತ್ಯೇಕ ಇಲಾಖೆ ಸ್ಥಾಪನೆ; ಭಾಷಾಂತರಕ್ಕೆ ಆ್ಯಪ್‌: ಅಮಿತ್ ಶಾ

ಪಿಟಿಐ
Published 21 ಮಾರ್ಚ್ 2025, 13:59 IST
Last Updated 21 ಮಾರ್ಚ್ 2025, 13:59 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

ಪಿಟಿಐ ಚಿತ್ರ

ನವದೆಹಲಿ: ‘ಭಾರತೀಯ ಭಾಷೆಗಳು ಈ ದೇಶದ ಸಂಪತ್ತು. ಹೀಗಾಗಿ ಯಾವುದೇ ಭಾಷೆ ಅಥವಾ ರಾಜ್ಯದ ಜನರ ಮೇಲೆ ಹಿಂದಿ ಹೇರುತ್ತಿಲ್ಲ. ಬದಲಿಗೆ ಭಾರತೀಯ ಭಾಷೆಗಳ ಕುರಿತು ‘ರಾಜಭಾಷಾ ವಿಭಾಗ’ದ ಅಡಿಯಲ್ಲಿ ಹೊಸ ಇಲಾಖೆಯನ್ನು ಆರಂಭಿಸಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಶುಕ್ರವಾರ ಹೇಳಿದ್ದಾರೆ.

ADVERTISEMENT

ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಭಾರತದ ಎಲ್ಲಾ ಭಾಷೆಗಳನ್ನು ಉತ್ತೇಜಿಸಿ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ಭಾಷೆಗಳ ಇಲಾಖೆಯನ್ನು ತೆರೆಯಲಿದೆ. ಭಾಷೆಗಳ ನಡುವೆ ಭಾಷಾಂತರಕ್ಕೆ ಮೊಬೈಲ್ ಆ್ಯಪ್‌ ಹೊರತರಲಾಗುವುದು’ ಎಂದಿದ್ದಾರೆ. 

‘ಕೇಂದ್ರ ಸರ್ಕಾರ ದಕ್ಷಿಣದ ಭಾಷೆಗಳ ವಿರೋಧಿಯಲ್ಲ. ನಾನು ಗುಜರಾತ್‌ನಿಂದ ಬಂದಿದ್ದೇನೆ. ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನಿಂದ ಬಂದಿದ್ದಾರೆ. ಇಲ್ಲಿ ಭಾಷೆ ಮುಖ್ಯವಲ್ಲ. ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್‌ಗಳು ಭಾರತೀಯ ಭಾಷೆಯಲ್ಲಿ ಲಭ್ಯವಾಗಬೇಕು ಎಂಬುದಷ್ಟೇ ಕೇಂದ್ರದ ಉದ್ದೇಶ’ ಎಂದಿದ್ದಾರೆ.

‘ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳನ್ನು ತಮಿಳಿನಲ್ಲಿ ನೀಡಲು ತಮಿಳುನಾಡು ಸರ್ಕಾರಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಅವರ ಆರ್ಥಿಕತೆಗೆ ಪೆಟ್ಟು ಬೀಳಲಿದೆ. ಇದನ್ನು ನಾವು ಕಳೆದ ಎರಡು ವರ್ಷಗಳಿಂದ ಹೇಳುತ್ತಿದ್ದೇವೆ. ಆದರೆ ದಕ್ಷಿಣದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ, ತಮಿಳಿನಲ್ಲೇ ನಾವು ವೃತ್ತಿಪರ ಶಿಕ್ಷಣ ನೀಡಲಿದ್ದೇವೆ’ ಎಂದು ಅಮಿತ್ ಶಾ ಭರವಸೆ ನೀಡಿದರು.

‘ತಮ್ಮ ಭ್ರಷ್ಟಾಚಾರ ಮರೆ ಮಾಚಲು ಹಾಗೂ ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ಭಾಷಾ ವಿವಾದವನ್ನು ಹುಟ್ಟುಹಾಕಿವೆ. ಭಾರತೀಯ ಭಾಷೆಗಳನ್ನು ರಕ್ಷಿಸಲು ನಮ್ಮ ಪಕ್ಷ ಬದ್ಧವಾಗಿದೆ. ದೇಶದ ಎಲ್ಲ ನಾಗರಿಕರು, ಮುಖ್ಯಮಂತ್ರಿಗಳು ಮತ್ತು ಸಂಸದರ ಜೊತೆಗೆ ಡಿಸೆಂಬರ್‌ನಿಂದ ಅವರವರ ಭಾಷೆಯಲ್ಲಿ ಸಂವಹನ ನಡೆಸುತ್ತೇವೆ. ತಮ್ಮ ಭ್ರಷ್ಟಚಾರವನ್ನು ಮರೆಮಾಚಲು ಭಾಷೆಯ ವಿಚಾರವನ್ನು ಬಳಸಿಕೊಳ್ಳುತ್ತಿರುವವರಿಗೆ ಇದು ದಿಟ್ಟ ಉತ್ತರವಾಗಿರುತ್ತದೆ’ ಎಂದಿದ್ದಾರೆ.

‘ಭಾಷೆಯ ವಿಷಯದಲ್ಲಿ ದೇಶದಲ್ಲಿ ಬಹಳಷ್ಟು ವಿಭಜನೆಗಳಾಗಿವೆ. ಹಿಂದಿ ಯಾವುದೇ ಭಾಷೆಯೊಂದಿಗೆ ಸ್ಪರ್ಧೆಗಿಳಿದಿಲ್ಲ. ಆದರೆ ಎಲ್ಲಾ ಭಾಷೆಯ ಉತ್ತಮ ಸ್ನೇಹಿತ. ಆದರೆ ತಮ್ಮ ರಾಜಕೀಯ ಲಾಭಕ್ಕಾಗಿ ಕೆಲವೊಂದು ಪಕ್ಷಗಳು ಈ ವಿವಾದ ಆರಂಭಿಸಿವೆ’ ಎಂದು ಆರೋಪಿಸಿದರು.

ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ಕುರಿತು ಕೇಂದ್ರದೊಂದಿಗೆ ಸಂಘರ್ಷ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.