ADVERTISEMENT

ಪಶ್ಚಿಮ ಬಂಗಾಳ: ಮಮತಾ ರಾಜೀನಾಮೆಗೆ ಬಿಜೆಪಿ ಪಟ್ಟು

ಕಾನೂನು ಸುವ್ಯವಸ್ಥೆ ಬಗ್ಗೆ ಗೃಹಸಚಿವ, ರಾಷ್ಟ್ರಪತಿಗೆ ಮಾಹಿತಿ ನೀಡಲು ಕ್ರಮ

ಪಿಟಿಐ
Published 11 ಅಕ್ಟೋಬರ್ 2019, 19:46 IST
Last Updated 11 ಅಕ್ಟೋಬರ್ 2019, 19:46 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಮುರ್ಷಿದಾಬಾದ್‌ ಜಿಲ್ಲೆಯ ಜಿಯಾಗಂಜ್‌ನಲ್ಲಿ ಗುರುವಾರ ನಡೆದ ತ್ರಿವಳಿ ಹತ್ಯೆ ಪ್ರಕರಣವು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ ಉಂಟುಮಾಡಿದ್ದು, ‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಒತ್ತಾಯಿಸಿದೆ.

‘ಕಳೆದ ಕೆಲವು ದಿನಗಳಲ್ಲಿ ಬಿಜೆಪಿಯ ಎಂಟು ಮಂದಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಹಾಡಹಗಲಲ್ಲೇ ಜನರನ್ನು ಹತ್ಯೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆಯು ಸಂಪುರ್ಣವಾಗಿ ಕುಸಿದಿದೆ’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯ ಒತ್ತಾಯಿಸಿದ್ದಾರೆ.

‘ರಾಜ್ಯದ ಸ್ಥಿತಿಗತಿಯನ್ನು ಗೃಹಸಚಿವ ಅಮಿತ್‌ ಶಾ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಗಮನಕ್ಕೆ ತರಲು ನಾವು ಉದ್ದೇಶಿಸಿದ್ದು, ಭೇಟಿಗೆ ಸಮಯಾವಕಾಶ ನೀಡುವಂತೆ ಅವರಲ್ಲಿ ಮನವಿ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿಯ 80 ಮಂದಿ ಕಾರ್ಯಕರ್ತರ ಹತ್ಯೆಯಾಗಿದ್ದು, ಆ ಬಗ್ಗೆ ಸಮಗ್ರ ವಿವರಗಳನ್ನು ಹೊಂದಿರುವ ಮನವಿಪತ್ರವನ್ನು ಗೃಹಸಚಿವರು ಮತ್ತು ರಾಷ್ಟ್ರಪತಿಗೆ ನೀಡಲಾಗುವುದು’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿಜೆಪಿಯ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಮುಖಂಡ ತಪಸ್‌ ರೇ ಅವರು , ‘ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಎಂಥ ದಾಳಿಗಳು ನಡೆಯುತ್ತಿವೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಮೊದಲು ಆ ರಾಜ್ಯಗಳತ್ತ ಗಮನಹರಿಸಿ’ ಎಂದಿದ್ದಾರೆ.

ಮುರ್ಷಿದಾಬಾದ್‌ನಲ್ಲಿ ಗುರುವಾರ ಹತ್ಯೆಯಾಗಿರುವ ಶಾಲಾ ಶಿಕ್ಷಕರ ಕುಟುಂಬವು ತಮ್ಮ ಸಂಘಟನೆಯ ಬೆಂಬಲಿಗರಾಗಿದ್ದರು ಎಂದು ಆರ್‌ಎಸ್‌ಎಸ್‌ ಹೇಳಿಕೊಂಡಿದೆ. ಇದರ ಬೆನ್ನಲ್ಲೇ ಬಿಜೆಪಿ ಮತ್ತು ರಾಜ್ಯಪಾಲ ಜಗದೀಪ್‌ ಧನ್‌ಖರ್‌ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ಟೀಕೆಗೆ ಒಳಪಡಿಸಿದ್ದರು.

ನಾಚಿಕೆಯಾಗಬೇಕು: ಸೇನ್‌

ಶಾಲಾ ಶಿಕ್ಷಕ, ಅವರ ಗರ್ಭಿಣಿ ಪತ್ನಿ ಹಾಗೂ ಎಂಟು ವರ್ಷದ ಬಾಲಕನ ಹತ್ಯೆಯನ್ನು ‘ಅತ್ಯಂತ ಭಯಾನಕ ಘಟನೆ’ ಎಂದು ಬಣ್ಣಿಸಿರುವ ಚಿತ್ರನಟಿ, ನಿರ್ಮಾಪಕಿ ಅಪರ್ಣಾ ಸೇನ್‌, ‘ಈ ಘಟನೆಯ ಬಗ್ಗೆ ನಮಗೆ ನಾಚಿಕೆಯಾಗಬೇಕು. ಅಪರಾಧಿಗಳನ್ನು ಶಿಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸೇನ್‌, ‘ನಮ್ಮದೇ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಈ ಹೀನಾಯ ಘಟನೆ ನಡೆದಿದೆ. ರಾಜಕೀಯ ಒಲವುಗಳೆನೇ ಇರಬಹುದು, ರಾಜ್ಯದ ಪ್ರತಿ ನಾಗರಿಕನಿಗೆ ರಕ್ಷಣೆ ನೀಡುವ ಹೊಣೆಯು ನಿಮ್ಮಮೇಲಿದೆ. ನೀವು ಎಲ್ಲರಿಗೂ ಮುಖ್ಯಮಂತ್ರಿಯಾಗಿದ್ದೀರಿ’ ಎಂದಿದ್ದಾರೆ.

ಗುಂಪು ಹಲ್ಲೆ ಸೇರಿದಂತೆ ಹಲವು ವಿಚಾರಗಳನ್ನು ಖಂಡಿಸಿ ಇತ್ತೀಚೆಗೆ ಮೋದಿಗೆ ಬರೆದಿದ್ದ ಬಹಿರಂಗ ಪತ್ರಕ್ಕೆ ಸೇನ್‌ ಅವರೂ ಸಹಿ ಮಾಡಿದ್ದರು. ಆ ಸಂದರ್ಭದಲ್ಲಿ ‘ಆಯ್ದ ಘಟನೆಗಳಿಗೆ ಮಾತ್ರ ಯಾಕೆ ಆಕ್ರೋಶ ವ್ಯಕ್ತಪಡಿಸುತ್ತೀರಿ’ ಎಂದು ಸೇನ್‌ ವಿರುದ್ಧವೂ ಟೀಕೆಗಳು ಬಂದಿದ್ದವು.

***

ಮಮತಾ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು
-ಕೈಲಾಸ್‌ ವಿಜಯವರ್ಗೀಯ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪಶ್ಚಿಮ ಬಂಗಾಳದ ವಿರುದ್ಧ ಆರೋಪ ಮಾಡುವುದಕ್ಕೂ ಮುನ್ನ ಬಿಜೆಪಿನಾಯಕರು ತಮ್ಮದೇ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿನ ಕಾನೂನು ಸ್ಥಿತಿಯತ್ತ ಗಮನಹರಿಸುವುದು ಅಗತ್ಯ
-ತಪಸ್‌ ರೇ, ಟಿಎಂಸಿ ಮುಖಂಡ

ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವಾಗ ದುರ್ಗಾಪೂಜಾ ಉತ್ಸವ ನಡೆಸುವ ಮೂಲಕ ಮಮತಾ ಅವರು ಪ್ರಜಾಪ್ರಭುತ್ವದ ಅಣಕವಾಡಿದ್ದಾರೆ
-ದಿಲೀಪ್‌ ಘೋಷ್‌, ಬಿಜೆಪಿ ರಾಜ್ಯಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.