ADVERTISEMENT

‘ಒಂದು ದೇಶ ಒಂದು ಭಾಷೆ’ | ಶಾ ಹೇಳಿಕೆಗೆ ಹಿಂದಿಯೇತರ ರಾಜ್ಯಗಳಿಂದ ವಿರೋಧ

ಪಿಟಿಐ
Published 14 ಸೆಪ್ಟೆಂಬರ್ 2019, 20:00 IST
Last Updated 14 ಸೆಪ್ಟೆಂಬರ್ 2019, 20:00 IST
   

ನವದೆಹಲಿ: ‘ಹಿಂದಿ ಇಡೀ ದೇಶದ ಭಾಷೆ ಆಗಬೇಕು’ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.

ಹಿಂದಿ ದಿವಸದ ಅಂಗವಾಗಿ ಶನಿವಾರ ಟ್ವೀಟ್ ಮಾಡಿರುವ ಅವರು ‘ಭಾರತದ ಬಹುತೇಕ ಜನರು ಮಾತನಾಡುವ ಹಿಂದಿ ಭಾಷೆಯು ದೇಶವನ್ನು ಬೆಸೆಯುತ್ತಿದೆ. ಇತರ ಭಾಗಗಳಿಗೂ ಹಿಂದಿ ಭಾಷೆಯನ್ನು ವಿಸ್ತರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದಿದ್ದಾರೆ.

ಇದಕ್ಕೆ ಹಿಂದಿಯೇತರ ಭಾಷಾ ರಾಜ್ಯಗಳ ನಾಯಕರು, ಸಿಪಿಎಂ ಮತ್ತು ಕಾಂಗ್ರೆಸ್‌ನ ಕೆಲವು ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲೂ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಹ್ಯಾಷ್‌ಟ್ಯಾಗ್‌ ಮೂಲಕ ಈ ವಿಚಾರ ಚರ್ಚೆಯಾಗುತ್ತಿದೆ.

ADVERTISEMENT

‘ಭಾರತ ಹಲವು ಭಾಷೆಗಳ ಬೀಡಾಗಿದ್ದು, ಎಲ್ಲ ಭಾಷೆಗಳೂ ಮಹತ್ವ ಪಡೆದಿವೆ. ಆದರೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಗುರುತಿಸಿಕೊಳ್ಳುವಂತೆ ಮಾಡಬಲ್ಲ ಒಂದು ಭಾಷೆಯ ಅಗತ್ಯವಿದೆ’ ಎಂದು ಶಾ ಪ್ರತಿಪಾದಿಸಿದ್ದಾರೆ.

‘ಜನರು ತಮ್ಮ ಸ್ಥಳೀಯ ಭಾಷೆಯನ್ನು ಬೆಳೆಸುವುದರ ಜೊತೆಗೆ ಹಿಂದಿ ಭಾಷೆಯನ್ನು ಉಪಯೋಗಿಸುವ ಮೂಲಕ ಗಾಂಧೀಜಿ ಮತ್ತು ಸರ್ದಾರ್ ಪಟೇಲ್ ಅವರ ಏಕ ಭಾಷೆಯ ಕನಸನ್ನು ನನಸು ಮಾಡಬೇಕು. ಹಿಂದಿ ಭಾಷೆಯು ಪ್ರತಿ ವ್ಯಕ್ತಿ ಹಾಗೂ ಪ್ರತಿ ಮನೆಯನ್ನು ತಲುಪಬೇಕು. 2024ರ ಸಾರ್ವತ್ರಿಕ ಚುನಾವಣೆ ಹೊತ್ತಿಗೆ ಈ ವಿಚಾರದಲ್ಲಿ ಮಹತ್ವದ ಪ್ರಗತಿ ಆಗಿರಬೇಕು’ ಎಂದು ಅವರು ಹೇಳಿದ್ದಾರೆ.

* ಗೃಹಸಚಿವರ ದೃಷ್ಟಿಕೋನ ಭಾರತದ ಏಕತೆಗೆ ಬೆದರಿಕೆ ಒಡ್ಡುವಂತಿದೆ. ಇದು ‘ಹಿಂದಿಯಾ’ ಅಲ್ಲ, ಇಂಡಿಯಾ. ಪ್ರಧಾನಿ ಸ್ಪಷ್ಟನೆ ನೀಡದಿದ್ದರೆ ಹೋರಾಟಕ್ಕೆ ಇದು ನಾಂದಿಯಾದೀತು

-ಎಂ.ಕೆ. ಸ್ಟಾಲಿನ್‌, ಡಿಎಂಕೆ ನಾಯಕ

* ಎಲ್ಲಾ ಭಾಷೆ, ಸಂಸ್ಕೃತಿಗಳನ್ನು ಗೌರವಿಸಬೇಕು. ಆದರೆ ನಮ್ಮ ಮಾತೃಭಾಷೆಯನ್ನು ಬಲಿಕೊಡಬಾರದು.

-ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ

* ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ. ಅದು 22 ಅಧಿಕೃತ ಭಾಷೆಗಳಲ್ಲಿ ಒಂದು. ಸುಳ್ಳು ಮಾಹಿತಿಯಿಂದ ಭಾಷೆಯನ್ನು ಬೆಳೆಸಲಾಗದು

-ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

* ಹಿಂದಿಯಂತೆಯೇ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡ ಭಾಷಾ ದಿನವನ್ನು ದೇಶದಾದ್ಯಂತ ಯಾವಾಗ ಆಚರಿಸುತ್ತೀರಿ ಮೋದಿಯವರೇ?

-ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.