ADVERTISEMENT

ತಮಿಳುನಾಡು: ಮಿತ್ರಪಕ್ಷಗಳ ನಾಯಕರನ್ನು ಭೇಟಿಯಾಗಲಿರುವ ಶಾ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 11:48 IST
Last Updated 17 ನವೆಂಬರ್ 2020, 11:48 IST
ಅಮಿತ್‌ ಶಾ
ಅಮಿತ್‌ ಶಾ   

ಚೆನ್ನೈ:ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ವಾರಾಂತ್ಯಕ್ಕೆ ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್‌ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಎನ್‌ಡಿಎ ಮಿತ್ರ ಪಕ್ಷಗಳಾದ ಎಐಡಿಎಂಕೆ, ಪಿಎಂಕೆ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.

ವಿಧಾನಸಭೆ ಚುನಾವಣೆಗೆ ಬಿಜೆಪಿಯ ಯೋಜನೆಗಳು ಹಾಗೂ ಮೈತ್ರಿಕೂಟದ ಬಗ್ಗೆ ಆರಂಭಿಕ ಚಿತ್ರಣವನ್ನು ಈ ಸಭೆಯು ನೀಡುವ ಸಾಧ್ಯತೆ ಇದೆ. ನ.21ಕ್ಕೆ ಚೆನ್ನೈಗೆ ಆಗಮಿಸಲಿರುವ ಶಾ, ಚೆನ್ನೈ ಮೆಟ್ರೊ ಎರಡನೇ ಹಂತದ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ. ಜೊತೆಗೆ ನಗರದ ನೀರಿನ ಅವಶ್ಯಕತೆಗಾಗಿ ನಿರ್ಮಿಸಲಾಗಿರುವ ನೂತನ ಜಲಾಶಯವನ್ನು ಉದ್ಘಾಟಿಸಲಿದ್ದಾರೆ. ಇದಾದ ನಂತರದಲ್ಲಿ ಮಿತ್ರಪಕ್ಷಗಳ ನಾಯಕರೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸಲಿದ್ದಾರೆ. ಎಐಎಡಿಎಂಕೆ ನಾಯಕ, ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಹಾಗೂ ಪಿಎಂಕೆ ನಾಯಕ, ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ, ಡಿಎಂಡಿಕೆ ನಾಯಕರು ಹಾಗೂ ಇತರೆ ಮಿತ್ರ ಪಕ್ಷಗಳ ನಾಯಕರ ಜೊತೆ ಚರ್ಚಿಸಲಿದ್ದಾರೆ. ಈ ಎಲ್ಲ ಪಕ್ಷಗಳೂ 2019ರ ಲೋಕಸಭೆ ಚುನಾವಣೆಯನ್ನು ಎನ್‌ಡಿಎ ಮೈತ್ರಿಕೂಟದಡಿ ಎದುರಿಸಿದ್ದವು.

‘ಇದು ಅಧಿಕೃತವಾದ ಸಭೆಯಲ್ಲ. ಹಲವು ಸಮಯದ ಬಳಿಕ ಅಮಿತ್‌ ಶಾ ಅವರು ತಮಿಳುನಾಡಿಗೆ ಭೇಟಿ ನೀಡುತ್ತಿರುವ ಕಾರಣ ಮಿತ್ರಪಕ್ಷಗಳ ಎಲ್ಲ ನಾಯಕರು ಅವರನ್ನು ಭೇಟಿಯಾಗಲಿದ್ದಾರೆ’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದರು. ಶಾ ಅವರು ನಟ ರಜನೀಕಾಂತ್‌ ಮತ್ತು ಡಿಎಂಕೆಯಿಂದ ಉಚ್ಛಾಟನೆಗೊಂಡ ನಾಯಕ ಎಂ.ಕೆ.ಅಳಗಿರಿ (ಎಂ.ಕರುಣಾನಿಧಿ ಅವರ ಹಿರಿಯ ಪುತ್ರ) ಅವರನ್ನು ಭೇಟಿಯಾಗುವುದಿಲ್ಲ ಎಂದೂ ಅವರು ಹೇಳಿದರು. ಈ ಸಭೆಯ ಬಳಿಕ ಪಕ್ಷದ ಪದಾಧಿಕಾರಿಗಳು ಹಾಗೂ ಕೋರ್‌ ಸಮಿತಿ ಸದಸ್ಯರೊಂದಿಗೂ ಶಾ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ADVERTISEMENT

ಅಳಗಿರಿಯವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಇದು ಸಫಲವಾದರೆ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟ್ಯಾಲಿನ್‌ ಅವರಿಗೆ ಹಿನ್ನಡೆಯುಂಟು ಮಾಡಲಿದೆ. 2019ರ ಲೋಕಸಭೆಗೆ ಮಾಡಿಕೊಂಡ ಮೈತ್ರಿಯನ್ನು ಮುಂದುವರಿಸಲು ಬಿಜೆಪಿ ನಿರ್ಧರಿಸಿದ್ದು, ಇದರ ಜೊತೆಗೆ ಇನ್ನಷ್ಟು ಪಕ್ಷಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದೆ ಎನ್ನುವುದನ್ನು ಈ ಸಭೆಯು ಸೂಚಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಬಿಜೆಪಿಯು ‘ವೆಟ್ರಿವೇಲ್‌ ಯಾತ್ರೆ’ ನಡೆಸಿತ್ತು. ಇದು ಎಐಎಡಿಎಂಕೆ ಹಾಗೂ ಬಿಜೆಪಿ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಜೊತೆಗೆ ವಿಧಾನಸಭೆ ಚುನಾವಣೆಗೆ ಎಐಎಡಿಎಂಕೆ ಏಕಾಂಗಿಯಾಗಿ ಸ್ಪರ್ಧಿಸಬಹುದು ಎನ್ನುವ ವದಂತಿಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ಅಮಿತ್‌ ಶಾ ಅವರು ನಾಯಕರೊಂದಿಗೆ ಸಭೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.