ಅಮಿತ್ ಶಾ
– ಪಿಟಿಐ ಚಿತ್ರ
ಜಮ್ಮು: ಮೂರು ದಿನಗಳ ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತ–ಪಾಕಿಸ್ತಾನ ಗಡಿಯಲ್ಲಿರುವ ಬಿಎಸ್‌ಎಫ್‌ನ ಮುಂಚೂಣಿ ಠಾಣೆಗಳಿಗೆ ಸೋಮವಾರ ಭೇಟಿ ನೀಡಿದರು.
ಈ ಪ್ರದೇಶದಲ್ಲಿ ಕಳೆದೆರಡು ವಾರಗಳಿಂದ ಪಾಕಿಸ್ತಾನಿ ಉಗ್ರಗಾಮಿಗಳ ವಿರುದ್ಧ ಭಾರಿ ಕಾರ್ಯಾಚರಣೆ ನಡೆಯುತ್ತಿದೆ.
ಮಧ್ಯಾಹ್ನದ ವೇಳೆಗ ಜಮ್ಮುವಿನ ಕಥುವಾದಿಂದ ಹರಿನಗರ ವಲಯಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿದ ಶಾ, ಬಳಿಕ ಬಿಎಸ್‌ಎಫ್ ಹೊರಠಾಣೆ ‘ವಿನಯ್’ಗೆ ತೆರಳಿ ಪರಿಸ್ಥಿತಿ ಅವಲೋಕಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್‌ಎಫ್ ಮುಖ್ಯ ನಿರ್ದೇಶಕ ದಲ್ಜಿತ್ ಸಿಂಗ್ ಚೌದರಿ, ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಮಾಹಾನಿರ್ದೇಶಕ ನಳಿನ್ ಪ್ರಭಾತ್ ಹಾಗೂ ಬಿಎಸ್‌ಎಫ್ ಇನ್‌ಸ್ಪೆಕ್ಟರ್ ಜನರಲ್ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಗೃಹ ಸಚಿವರನ್ನು ಸ್ವಾಗತಿಸಿದರು.
ಭಾನುವಾರ ಜಮ್ಮು ತಲುಪಿದ್ದ ಅಮಿತ್ ಶಾ ಬಿಜೆಪಿ ಶಾಸಕರು ಹಾಗೂ ಪದಾಧಿಕಾರಿಗಳೊಂದಿಗೆ ಸುಮಾರು ಎರಡು ಗಂಟೆ ಗುಪ್ತ ಸಭೆ ನಡೆಸಿದ್ದರು.
ಗೃಹ ಸಚಿವರ ಭೇಟಿ ಹಿನ್ನೆಲೆ ಭದ್ರತಾ ಪಡೆಗಳು ತೀವ್ರ ಕಣ್ಗಾವಲು ವಹಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಡಿಯುದ್ದಕ್ಕೂ ಇರುವ ಸದ್ಯದ ಪರಿಸ್ಥಿತಿ ಬಗ್ಗೆ ಹಿರಿಯ ಅಧಿಕಾರಿಗಳು ಶಾಗೆ ಮಾಹಿತಿ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.