ADVERTISEMENT

ಆಟೊ, ಕ್ಯಾಬ್‌ ಚಾಲಕರಿಗೆ ವಾರ್ಷಿಕ ತಲಾ ₹15 ಸಾವಿರ: ಯೋಜನೆಗೆ ನಾಯ್ಡು ಚಾಲನೆ

ಪಿಟಿಐ
Published 4 ಅಕ್ಟೋಬರ್ 2025, 15:30 IST
Last Updated 4 ಅಕ್ಟೋಬರ್ 2025, 15:30 IST
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು   

ವಿಜಯವಾಡ: ಆಟೊ, ಕ್ಯಾಬ್‌ ಮತ್ತು ಮ್ಯಾಕ್ಸಿ ಕ್ಯಾಬ್‌ ಚಾಲಕರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ‘ಆಟೊ ಡ್ರೈವರ್ಲ ಸೇವಲೊ‘ ಯೋಜನೆಗೆ (ಆಟೊ ಚಾಲಕರ ಸೇವಾ ಯೋಜನೆ) ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಶನಿವಾರ ಚಾಲನೆ ನೀಡಿದರು.

2.26 ಲಕ್ಷ ಆಟೊ ಚಾಲಕರು, 38 ಸಾವಿರ ಪ್ರಯಾಣಿಕ ವಾಹನ ಚಾಲಕರು, 20 ಸಾವಿರ ಕ್ಯಾಬ್‌ ಚಾಲಕರು, 6 ಸಾವಿರ ಮ್ಯಾಕ್ಸಿ ಕ್ಯಾಬ್‌ ಚಾಲಕರು ಸೇರಿದಂತೆ ಒಟ್ಟು 2.9 ಲಕ್ಷ ಫಲಾನುಭವಿಗಳಿಗೆ ವಾರ್ಷಿಕ ತಲಾ ₹15 ಸಾವಿರ ನೀಡಲಾಗುತ್ತದೆ. 2025–26ನೇ ಸಾಲಿನಲ್ಲಿ ₹436 ಕೋಟಿ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಸಂದಾಯ ಮಾಡಲಾಗುತ್ತದೆ.

ವಿಜಯವಾಡದ ಸಿಂಗ್‌ ನಗರದಲ್ಲಿ ಅಧಿಕಾರಿಗಳು ಹಾಗೂ ಫಲಾನುಭವಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಚಾಲನೆ ನೀಡಿದ ನಾಯ್ಡು, ‘ಹದಗೆಟ್ಟ ರಸ್ತೆಗಳಿಂದಾಗಿ ಆಟೊ ಚಾಲಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆಟೊ ದುರಸ್ತಿಗಾಗಿ ಗಳಿಕೆಯ ಅರ್ಧ ಹಣ ಖರ್ಚಾಗುತ್ತಿದೆ. ಇದರಿಂದ ನಿಮ್ಮ ದೇಹಗಳು ಬಹಳಷ್ಟು ದಣಿದಿವೆ. ಟಿಡಿಪಿ ನೇತೃತ್ವದ ಎನ್‌ಡಿಎ ಸರ್ಕಾರವು 23 ಸಾವಿರ ಕಿ.ಮೀ. ರಸ್ತೆ ದುರಸ್ತಿಗೆ ₹3,400 ಕೋಟಿ ಅನುದಾನ ನೀಡಿದ್ದು, ಗುಂಡಿಮುಕ್ತ ರಸ್ತೆ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.

ADVERTISEMENT

ಎಪಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಸ್ತ್ರೀ ಶಕ್ತಿ’ ಯೋಜನೆ ಜಾರಿಗೊಳಿಸಿದ ಬಳಿಕ, ಆಟೊ, ಕ್ಯಾಬ್‌ ಚಾಲಕರ ಜೀವನೋಪಾಯದ ಮೇಲೆ ಪರಿಣಾಮ ಬೀರಿತ್ತು. ಇವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.