ADVERTISEMENT

ವಿಜಯವಾಡ| ಕೋವಿಡ್‌ ಆಸ್ಪತ್ರೆಯಾಗಿಸಿದ್ದ ಹೋಟೆಲ್‌ನಲ್ಲಿ ಅಗ್ನಿ ದುರಂತ: 10 ಸಾವು

ಪಿಟಿಐ
Published 9 ಆಗಸ್ಟ್ 2020, 19:38 IST
Last Updated 9 ಆಗಸ್ಟ್ 2020, 19:38 IST
ವಿಜಯವಾಡದಲ್ಲಿ ಕೋವಿಡ್‌ ಆಸ್ಪತ್ರೆಯಾಗಿದ್ದ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ದುರಂತ
ವಿಜಯವಾಡದಲ್ಲಿ ಕೋವಿಡ್‌ ಆಸ್ಪತ್ರೆಯಾಗಿದ್ದ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ದುರಂತ    

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ ಕೋವಿಡ್‌ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದ ಹೋಟೆಲ್‌ನಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ಜನರು ಮೃತಪಟ್ಟಿದ್ದಾರೆ.

ಸ್ವರ್ಣ ಪ್ಯಾಲೇಸ್‌ ಹೋಟೆಲ್‌ನಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ₹50 ಲಕ್ಷ ಪರಿಹಾರ ಘೋಷಿಸಿದ್ದಾರೆ. ದುರಂತದ ಕುರಿತು ತನಿಖೆಗೂ ಅವರು ಆದೇಶಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಅವರು ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಜೊತೆ ಮಾತನಾಡಿರುವೆ. ರಾಜ್ಯ ಸರ್ಕಾರಕ್ಕೆ ಎಲ್ಲ ನೆರವು ಒದಗಿಸುವ ಭರವಸೆ ನೀಡಿದ್ದೇನೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

‘ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ, ಮೃತರ ಕುಟುಂಬಕ್ಕೆ ತಲಾ ₹ 2ಲಕ್ಷ, ಗಾಯಗೊಂಡವರಿಗೆ ₹ 50,000 ನೀಡುವುದಾಗಿ’ ಪ್ರಧಾನ ಮಂತ್ರಿ ಕಚೇರಿ ಟ್ವೀಟ್‌ ಮಾಡಿದೆ.

‘ಈ ದುರಂತಕ್ಕೆ ಶಾರ್ಟ್‌ ಸರ್ಕಿಟ್‌ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತನಿಖೆ ನಂತರ ನಿಜವಾದ ಕಾರಣ ಗೊತ್ತಾಗಲಿದೆ’ ಎಂದು ಕೃಷ್ಣಾ ಜಿಲ್ಲೆಯ ಜಿಲ್ಲಾಧಿಕಾರಿ ಮೊಹಮ್ಮದ್‌ ಇಮ್ತಿಯಾಜ್‌ ಹೇಳಿದ್ದಾರೆ.

‘ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ಹೋಟೆಲ್‌ ಸ್ವರ್ಣ ಪ್ಯಾಲೇಸ್‌ಅನ್ನು ರಮೇಶ್‌ ಆಸ್ಪತ್ರೆ ಸಮೂಹ ಲೀಸ್‌ ಮೇಲೆ ಪಡೆದಿತ್ತು. ಈ ಹೋಟೆಲ್‌ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅಗ್ನಿ ಸುರಕ್ಷತಾ ನಿರ್ದೇಶಕ ಜೈರಾಮ್‌ ನಾಯ್ಕ್‌ ಹೇಳಿದ್ದಾರೆ. ಹೀಗಾಗಿ ಹೋಟೆಲ್‌ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಹೇಳಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನ ಕೋವಿಡ್‌ ಆಸ್ಪತ್ರೆಯ ಐಸಿಯುನಲ್ಲಿ ಗುರುವಾರ ಸಂಭವಿಸಿದ ಅಗ್ನಿ ದುರಂತದಲ್ಲಿ 8 ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.