
ನವದೆಹಲಿ: ಬ್ಯಾಂಕ್ ವಂಚನೆ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿ ಎರಡನೇ ಬಾರಿಗೆ ಇಂದು ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
66 ವರ್ಷದ ಉದ್ಯಮಿ ಬೆಳಿಗ್ಗೆ 10.30ರ ಸುಮಾರಿಗೆ ಕೇಂದ್ರ ದೆಹಲಿಯಲ್ಲಿರುವ ಇ.ಡಿ ಕಚೇರಿಗೆ ಆಗಮಿಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಅವರ ಹೇಳಿಕೆ ದಾಖಲಿಸಿಕೊಳ್ಳುವುದಾಗಿ ಅಧಿಕಾರಿಗಳಿಗಳು ತಿಳಿಸಿದ್ದಾರೆ. 2025ರ ಆಗಸ್ಟ್‌ನಲ್ಲಿ ಅವರನ್ನು ಇ.ಡಿ ಮೊದಲ ಬಾರಿಗೆ ವಿಚಾರಣೆಗೆ ಒಳಪಡಿಸಿತ್ತು.
ಅನಿಲ್ ಅಂಬಾನಿ ಅವರ ಸಮೂಹ ಕಂಪನಿಯಾದ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ₹40,000 ಕೋಟಿಗೂ ಹೆಚ್ಚು ಹಣವನ್ನು ಬ್ಯಾಂಕ್‌ಗಳಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದೆ.
ಅಂಬಾನಿ ಮತ್ತು ಅವರ ಬಹು ಸಮೂಹ ಕಂಪನಿಗಳು ಸಾಲ ವಂಚನೆಯ ಆರೋಪಗಳನ್ನು ಎದುರಿಸುತ್ತಿವೆ. ಈ ಎಲ್ಲ ಪ್ರಕರಣಗಳ ತನಿಖೆಗಾಗಿ ಇ.ಡಿ ಇತ್ತೀಚೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ನಿರ್ದೇಶನದ ಮೇರೆಗೆ ಎಸ್‌ಐಟಿಯನ್ನು ರಚಿಸಲಾಗಿದೆ.
ಬುಧವಾರ ಇ.ಡಿ ಅಂಬಾನಿಯವರ ಮುಂಬೈನ ₹3,716 ಕೋಟಿ ಮೌಲ್ಯದ ಮನೆ 'ಅಬೋಡ್' ಅನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ.
ಇಡಿ ಸುಪ್ರೀಂ ಕೋರ್ಟ್‌ಗೆ ಒದಗಿಸಿದ ಮಾಹಿತಿಯ ಪ್ರಕಾರ, ಅನಿಲ್ ಧೀರೂಭಾಯಿ ಅಂಬಾನಿ ವಿರುದ್ಧ ಮೂರು ಹಣ ಅಕ್ರಮ ವರ್ಗಾವಣೆ ಪ್ರಕರಣಗಳನ್ನು ದಾಖಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.