ADVERTISEMENT

ಹಣ ಅಕ್ರಮ ವರ್ಗಾವಣೆ ನಡೆಸಿದ ಆರೋಪ: ಅನಿಲ್‌ ಅಂಬಾನಿಗೆ ಇ.ಡಿ ಸಮನ್ಸ್‌

ಪಿಟಿಐ
Published 6 ನವೆಂಬರ್ 2025, 14:35 IST
Last Updated 6 ನವೆಂಬರ್ 2025, 14:35 IST
<div class="paragraphs"><p>ಅನಿಲ್‌ ಅಂಬಾನಿ</p></div>

ಅನಿಲ್‌ ಅಂಬಾನಿ

   

–ಪಿಟಿಐ ಚಿತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ನಡೆಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು (ಇ.ಡಿ) ರಿಲಯನ್ಸ್‌ ಸಮೂಹ ಸಂಸ್ಥೆಯ ಅಧ್ಯಕ್ಷ ಅನಿಲ್‌ ಅಂಬಾನಿ ಅವರಿಗೆ ಹೊಸತಾಗಿ ಸಮನ್ಸ್‌ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ನವೆಂಬರ್‌ 14ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ. ಕಳೆದ ಆಗಸ್ಟ್‌ ತಿಂಗಳಲ್ಲಿಯೂ ತನಿಖಾ ಸಂಸ್ಥೆಯು 66 ವರ್ಷದ ಅನಿಲ್‌ ಅವರನ್ನು 10 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ(ಎಸ್‌ಬಿಐ) ₹2,929 ಕೋಟಿ ವಂಚನೆ ಮಾಡಿದ ಆರೋಪ ರಿಲಯನ್ಸ್ ಕಮ್ಯೂನಿಕೇಷನ್‌ ಲಿಮಿಟೆಡ್‌ (ಆರ್‌ಕಾಮ್‌) ಕಂಪನಿ ಮೇಲಿದೆ. ಈ ಸಂಬಂಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ದಾಖಲಿಸಿರುವ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ. ಕಳೆದ ಬಾರಿಯಂತೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿಯೇ ಹೇಳಿಕೆ ದಾಖಲಿಸಿಕೊಳ್ಳಲಿದೆ ಎಂದು ಮೂಲವು ತಿಳಿಸಿದೆ.

ಕೇಂದ್ರ ತನಿಖಾ ದಳ (ಸಿಬಿಐ) ಸಂಸ್ಥೆಯು ಆಗಸ್ಟ್‌ 21ರಂದು ದಾಖಲಿಸಿದ ಎಫ್‌ಐಆರ್‌ ಆಧರಿಸಿ ಇ.ಡಿ ತನಿಖೆ ನಡೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್‌ ಅಂಬಾನಿ ಅವರಿಗೆ ಸೇರಿದ ಮುಂಬೈನ ಹಲವು ಸ್ಥಳಗಳ ಮೇಲೂ ಸಿಬಿಐ ಶೋಧ ನಡೆಸಿತ್ತು.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಆರ್‌ಕಾಮ್‌ ₹ 40,000 ಕೋಟಿ ಸಾಲ ಬಾಕಿ ಇರಿಸಿಕೊಂಡಿದೆ. ಎಸ್‌ಬಿಐ ಒಂದಕ್ಕೇ ₹ 2,929 ಕೋಟಿ ನಷ್ಟ ಉಂಟು ಮಾಡಿದೆ ಎಂಬ ಆರೋಪ ಎಸ್‌ಬಿಐ ಸಲ್ಲಿಸಿರುವ ದೂರು ಆಧರಿಸಿ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿದೆ.

ಆರ್‌ಕಾಮ್‌ ಮತ್ತು ಅದರ ಸಹವರ್ತಿ ಕಂಪನಿಗಳಿಗೆ ಸೇರಿದ ನ₹ 7,500 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು ಇತ್ತೀಚೆಗೆ ಮುಟ್ಟುಗೋಲು ಹಾಕಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.