
ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಪ್ರಕರಣದಲ್ಲಿ ಶುಕ್ರವಾರ ವಿಚಾರಣೆಗೆ ಗೈರಾದ ರಿಲಯನ್ಸ್ ಸಮೂಹದ ಮುಖ್ಯಸ್ಥರಾದ ಅನಿಲ್ ಅಂಬಾನಿ ಅವರಿಗೆ ನವೆಂಬರ್ 17ರಂದು ಖುದ್ದು ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಇ.ಡಿ) ಮತ್ತೊಂದು ಸಮನ್ಸ್ ನೀಡಿದೆ.
ವರ್ಚುವಲ್ ಮೂಲಕ ವಿಚಾರಣೆಗೆ ಹಾಜರಾಗುವುದಾಗಿ ಅನಿಲ್ ಅಂಬಾನಿ ಅವರು ಮಾಡಿಕೊಂಡಿದ್ದ ಮನವಿಯನ್ನು ನಿರಾಕರಿಸಲಾಗಿತ್ತು ಎಂದು ಇ.ಡಿ.ಮೂಲಗಳು ತಿಳಿಸಿವೆ.
66 ವರ್ಷದ ಅನಿಲ್ ಅಂಬಾನಿ ಅವರು ‘ತನಿಖೆಗೆ ಸಂಪೂರ್ಣ ಸಹಕಾರ ನೀಡುವೆ’ ಎಂದು ಇ.ಡಿಗೆ ಲಿಖಿತ ರೂಪದಲ್ಲಿ ತಿಳಿಸಿದ್ದರು ಎಂದು ಅವರ ವಕ್ತಾರರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಜೈಪುರ–ರೀಂಗಸ್ ಟೋಲ್ ಹೆದ್ದಾರಿ ಕಾಮಗಾರಿ ನಿರ್ವಹಿಸಿದ್ದ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ಸಂಬಂಧಿಸಿ ನಡೆಸಿದ ಶೋಧದಲ್ಲಿ ಹೆದ್ದಾರಿ ಯೋಜನೆಯ ₹ 40 ಕೋಟಿಯನ್ನು ಹವಾಲಾ ಮಾರ್ಗದ ಮೂಲಕ ವಿದೇಶಕ್ಕೆ ವರ್ಗಾಯಿಸಿರುವುದು ಪತ್ತೆಯಾಗಿತ್ತು ಎಂದು ಇ.ಡಿ. ಮಾಹಿತಿ ನೀಡಿತ್ತು.
ಸೂರತ್ ಮೂಲದ ನಕಲಿ ಕಂಪನಿ ಮೂಲಕ ದುಬೈಗೆ ಹಣ ವರ್ಗಾಯಿಸಲಾಗಿದೆ ಎಂಬ ಆರೋಪ ಇದ್ದು. ತನಿಖೆ ವೇಳೆ ₹600 ಕೋಟಿಗೂ ಹೆಚ್ಚು ಮೊತ್ತದ ಅಂತರರಾಷ್ಟ್ರೀಯ ಹವಾಲಾ ಜಾಲ ಪತ್ತೆಯಾಗಿದೆ. ಕೆಲವು ಹವಾಲಾ ಡೀಲರ್‌ಗಳ ಹೇಳಿಕೆ ದಾಖಲಿಸಿಕೊಂಡ ನಂತರ ಅನಿಲ್ ಅಂಬಾನಿ ಅವರ ವಿಚಾರಣೆ ನಡೆಸಲು ನಿರ್ಧರಿಸಲಾಯಿತು ಎಂದು ಇ.ಡಿ.ಮೂಲಗಳು ತಿಳಿಸಿವೆ.
ಹಣ ಅಕ್ರಮ ವರ್ಗಾವಣೆ ಕಾನೂನು ಅಡಿಯಲ್ಲಿ ಇತ್ತೀಚೆಗಷ್ಟೆ ಅನಿಲ್ ಅಂಬಾನಿ ಮತ್ತು ಅವರ ಕಂಪನಿಗಳಿಗೆ ಸಂಬಂಧಿಸಿದ ₹7,500 ಕೋಟಿ ಮೊತ್ತದ ಆಸ್ತಿಯನ್ನು ಇ.ಡಿ ಜಪ್ತಿ ಮಾಡಿಕೊಂಡಿತ್ತು.
ರಿಲಯನ್ಸ್ ಸಮೂಹ ಕಂಪನಿಗಳ ವಿರುದ್ಧ ಕೇಳಿ ಬಂದಿರುವ ₹17,000 ಕೋಟಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣದಲ್ಲೂ ಈಗಾಗಲೇ ಇ.ಡಿ, ಅನಿಲ್ ಅಂಬಾನಿ ಅವರನ್ನು ಒಮ್ಮೆ ವಿಚಾರಣೆ ನಡೆಸಿದೆ.
15 ವರ್ಷದ ಹಿಂದಿನ ಪ್ರಕರಣ
‘2010ರ ರಸ್ತೆ ಯೋಜನೆಯ ಪ್ರಕರಣ ಇದಾಗಿದ್ದು ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಟೋಲ್ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿತ್ತು. ಅನಿಲ್ ಅಂಬಾನಿ ಅವರು ಈ ಕಂಪನಿಯ ಆಡಳಿತ ಮಂಡಳಿ ಸದಸ್ಯರಲ್ಲ. ಇದು ಸಂಪೂರ್ಣ ಸ್ಥಳೀಯ ಗುತ್ತಿಗೆಯಾಗಿದ್ದು ಯಾವುದೇ ವಿದೇಶಿ ಹಣ ವರ್ಗಾವಣೆ ನಡೆದಿಲ್ಲ. ರಸ್ತೆ ಪೂರ್ಣಗೊಂಡು 2021ರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ವಹಣೆಯಲ್ಲಿದೆ’ ಎಂದು ರಿಲಯನ್ಸ್ ಕಂಪನಿ ಹೇಳಿಕೊಂಡಿದೆ. ‘2007ರಿಂದ 2022ರ ಮಾರ್ಚ್‌ವರೆಗೆ ಅನಿಲ್ ಅಂಬಾನಿ ಅವರು ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು. ಕಂಪನಿಯ ದಿನನಿತ್ಯದ ನಿರ್ವಹಣೆಯಲ್ಲಿ ಅವರು ಭಾಗಿಯಾಗಿರಲಿಲ್ಲ’ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.