ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮೂರನೇ ಬಾರಿ ಇ.ಡಿ ವಿಚಾರಣೆಗೆ ಗೈರಾದ ದೇಶಮುಖ್‌

ಪಿಟಿಐ
Published 5 ಜುಲೈ 2021, 11:41 IST
Last Updated 5 ಜುಲೈ 2021, 11:41 IST
ಅನಿಲ್ ದೇಶಮುಖ್, ಸಂಗ್ರಹ ಚಿತ್ರ
ಅನಿಲ್ ದೇಶಮುಖ್, ಸಂಗ್ರಹ ಚಿತ್ರ   

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ತಮ್ಮ ವಿರುದ್ಧ ನಡೆಸುತ್ತಿರುವ ವಿಚಾರಣೆ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿರುವಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಅವರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

ಅಲ್ಲದೆ ‘ತನಿಖೆ ಪಾರದರ್ಶಕವಾಗಿಲ್ಲ‘ ಎಂದು ಆರೋಪಿಸಿ ಇ.ಡಿ ವಿಚಾರಣೆಗೆ ಮತ್ತೆ ಗೈರು ಹಾಜರಾಗಿರುವದೇಶಮುಖ್ ಅವರು, ಮುಂಬೈನ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಟಸ್ಸೈನ್ ಸುಲ್ತಾನ್ ಅವರಿಗೆ ಎಂಟು ಪುಟಗಳ ಪತ್ರ ಬರೆದಿದ್ದಾರೆ.

ಪತ್ರದಲ್ಲಿ, ‘ನಾನು ನನ್ನ ಸಂಪೂರ್ಣ ಜೀವನವನ್ನು ಸಾರ್ವಜನಿಕ ಸೇವೆಗಾಗಿ ಮೀಸಲಿಟ್ಟಿದ್ದೇನೆ ಮತ್ತು ಈಗ ನಡೆಯುತ್ತಿರುವ ತನಿಖೆಗೆ ಅಗತ್ಯ ನೆರವು ನೀಡಲು ಹಿಂಜರಿಯುವುದಿಲ್ಲ‘ ಎಂದು ಬರೆದಿದ್ದಾರೆ.

ADVERTISEMENT

‘ತನಿಖೆಯು ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿಲ್ಲ ಎಂಬುದು ನನ್ನಲ್ಲಿ ಆತಂಕ ಮೂಡಿಸಿದೆ‘ ಎಂದೂ ಉಲ್ಲೇಖಿಸಿದ್ದಾರೆ. ‘ಕಾನೂನಿನ ಪ್ರಕ್ರಿಯೆಯ ದಾರಿ ತಪ್ಪಿಸುವ ಮೂಲಕ ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಲಾಗುತ್ತಿದೆ‘ ಎಂದು ಬರೆದಿದ್ದಾರೆ.

ಮುಂಬೈನ ಮಾಜಿ ಪೊಲೀಸ್ ಆಯುಕ್ತ, ಹಾಲಿ ಗೃಹ ರಕ್ಷಕ ದಳದ ಪ್ರಧಾನ ಕಮಾಂಡಂಟ್ ಪರಮ್‌ ಬೀರ್ ಸಿಂಗ್ ಅವರು ಮಾಜಿ ಸಚಿವ ಅನಿಲ್ ದೇಶಮುಖ್ ವಿರುದ್ಧ ₹100 ಕೋಟಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಜಾರಿ ನಿರ್ದೇಶನಾಲಯ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು ಅನಿಲ್‌ ದೇಶಮುಖ್ ಅವರಿಗೆ ಮೂರನೇ ಬಾರಿ ಸಮನ್ಸ್‌ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.