ಬಾಬಾ ಸಿದ್ದೀಕಿ
ಮುಂಬೈ: ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯಿ ಅವರು ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆಯ ಪ್ರಮುಖ ಸೂತ್ರಧಾರ ಎಂದು ಮುಂಬೈ ಪೊಲೀಸರು ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯ (ಎಂಸಿಒಸಿಎ) ನಿಬಂಧನೆಗಳನ್ನು ಉಲ್ಲೇಖಿಸಿ, ಪ್ರಕರಣದ ಎಂಟು ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಪೊಲೀಸರು ಮಂಗಳವಾರ ಕೋರ್ಟ್‌ಗೆ ಮನವಿ ಸಲ್ಲಿಸಿದರು.
ಇತ್ತೀಚೆಗಷ್ಟೇ ಅಮೆರಿಕದಲ್ಲಿ ಬಂಧಿಸಲ್ಪಟ್ಟು ಅಲ್ಲಿನ ಜೈಲಿನಲ್ಲಿರುವ ಅನ್ಮೋಲ್ ಬಿಷ್ಣೋಯಿಯನ್ನು ಈ ಪ್ರಕರಣದಲ್ಲಿ ಬೇಕಾಗಿರುವ ಆರೋಪಿ ಎಂದು ಮುಂಬೈ ಪೊಲೀಸರು ಪರಿಗಣಿಸಿದ್ದಾರೆ. ಅಲ್ಲದೆ, ಮತ್ತೊಬ್ಬ ಆರೋಪಿ ಶುಭಂ ಲೋಂಕರ್ ಕೂಡ ಬೇಕಾಗಿರುವ ಪಟ್ಟಿಯಲ್ಲಿದ್ದಾನೆ.
ಆರೋಪಿಗಳಿಗೆ ಅನ್ಮೋಲ್ ಹಣಕಾಸಿನ ನೆರವು ನೀಡುತ್ತಿದ್ದ. ಹಣದ ಮೂಲ ಮತ್ತು ಬಳಕೆ ಖಚಿತಪಡಿಸಿಕೊಳ್ಳಲು ಇನ್ನಷ್ಟು ತನಿಖೆಯ ಅಗತ್ಯವಿದೆ. ಅಲ್ಲದೆ, ಅನ್ಮೋಲ್ ಸಹ ಆರೋಪಿಗಳನ್ನು ಸಂವಹನ ಅಪ್ಲಿಕೇಶನ್ ಮೂಲಕ ಸಂಪರ್ಕಿಸಿದ್ದಾನೆ. ಈ ಅಂಶದ ಬಗ್ಗೆಯೂ ಮಾಹಿತಿ ಸಂಗ್ರಹಿಸಬೇಕಾಗಿದೆ. ಹಾಗಾಗಿ, ಬಂಧಿತ ಆರೋಪಿಗಳನ್ನು ಕಸ್ಟಡಿಗೆ ಪಡೆಯುವ ಅಗತ್ಯವಿದೆ ಎಂದು ಪೊಲೀಸರು ಕೋರ್ಟ್‌ಗೆ ಅರುಹಿದರು.
ವಿಶೇಷ ಮೋಕಾ ನ್ಯಾಯಾಲಯದ ನ್ಯಾಯಾಧೀಶ ಎ.ಎಂ. ಪಾಟೀಲ್ ಅವರು ಪ್ರಮುಖ ಶೂಟರ್ ಶಿವಕುಮಾರ್ ಗೌತಮ್ ಸೇರಿದಂತೆ ಎಂಟು ಆರೋಪಿಗಳನ್ನು ಡಿಸೆಂಬರ್ 6ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಉಳಿದ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು.
ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದೀಕಿ (66) ಅವರನ್ನು ಅಕ್ಟೋಬರ್ 12 ರಂದು ಬಾಂದ್ರಾದಲ್ಲಿ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಶಿವಕುಮಾರ್ ಗೌತಮ್ ಸೇರಿ 26 ಆರೋಪಿಗಳನ್ನು ಬಂಧಿಸಲಾಗಿದೆ.
ನವೆಂಬರ್ 30ರಂದು, ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕಾಯ್ದೆ ಮೋಕಾ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳನ್ನು ಮಂಗಳವಾರ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಪತ್ರಕರ್ತರನ್ನು ಹೊರ ಕಳುಹಿಸಿದ ನ್ಯಾಯಾಧೀಶರು
ನ್ಯಾಯಾಲಯದ ಕಲಾಪ ಪ್ರಾರಂಭವಾಗುವ ಮೊದಲು, ಪ್ರಾಸಿಕ್ಯೂಷನ್ ಆಕ್ಷೇಪಣೆ ಸಲ್ಲಿಸಿದ ನಂತರ ನ್ಯಾಯಾಧೀಶರು ನ್ಯಾಯಾಲಯದಲ್ಲಿ ಹಾಜರಿದ್ದ ಪತ್ರಕರ್ತರನ್ನು ಹೊರಹೋಗುವಂತೆ ಹೇಳಿದರು. ರಿಮಾಂಡ್ ಅರ್ಜಿಯು ಸೂಕ್ಷ್ಮ ಮಾಹಿತಿಯನ್ನು ಹೊಂದಿದೆ ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.