ಬಾಬಾ ಸಿದ್ದೀಕಿ
ಮುಂಬೈ: 1993ರ ಮುಂಬೈ ಸ್ಫೋಟದ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರೊಂದಿಗೆ ನಂಟು ಹೊಂದಿದ್ದ ಕಾರಣಕ್ಕೆ ಅನ್ಮೋಲ್ ಬಿಷ್ಣೋಯಿ ಅವರು ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಅವರನ್ನು ಹತ್ಯೆ ಮಾಡಲು ಸೂಚಿಸಿದ್ದರು ಎಂದು ಪ್ರಮುಖ ಶೂಟರ್ ಶಿವಕುಮಾರ್ ಗೌತಮ್ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.
ಬಾಬಾ ಸಿದ್ದೀಕಿ ಅಥವಾ ಜೀಶನ್ ಸಿದ್ದೀಕ್ ಇಬ್ಬರಲ್ಲಿ ಒಬ್ಬರನ್ನು ಹತ್ಯೆ ಮಾಡುವಂತೆ ಅನ್ಮೋಲ್ ಬಿಷ್ಣೋಯಿ ₹10 ಲಕ್ಷದಿಂದ ₹15 ಲಕ್ಷ ನೀಡುವುದಾಗಿ ಸುಪಾರಿ ನೀಡಿದ್ದರು ಎಂದು ಶಿವಕುಮಾರ್ ಗೌತಮ್ ತಿಳಿಸಿದ್ದಾನೆ. ಈ ಎಲ್ಲಾ ವಿವರಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2024ರ ಅಕ್ಟೋಬರ್ 12ರಂದು ಮುಂಬೈನ ಬಾಂದ್ರಾ ಪೂರ್ವ ಪ್ರದೇಶದಲ್ಲಿನ ಮಗ ಜೀಶನ್ ಸಿದ್ದೀಕ್ ಅವರ ಕಚೇರಿಯ ಹೊರಗೆ 66 ವರ್ಷದ ಬಾಬಾ ಸಿದ್ದೀಕಿ ಅವರನ್ನು ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ಅನ್ಮೋಲ್ ಬಿಷ್ಣೋಯಿ, ಸದ್ಯ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಕಿರಿಯ ಸಹೋದರನಾಗಿದ್ದಾನೆ. ಅಮೆರಿಕದಲ್ಲಿ ಬಂಧನಕ್ಕೆ ಒಳಗಾಗಿ ಅಲ್ಲಿನ ಜೈಲಿನಲ್ಲಿರುವ ಅನ್ಮೋಲ್ ಬಿಷ್ಣೋಯಿಯನ್ನು ಈ ಪ್ರಕರಣದಲ್ಲಿ ಬೇಕಾಗಿರುವ ಪ್ರಮುಖ ಆರೋಪಿ ಎಂದು ಮುಂಬೈ ಪೊಲೀಸರು ಪರಿಗಣಿಸಿದ್ದಾರೆ. ಅಲ್ಲದೆ, ಮತ್ತೊಬ್ಬ ಆರೋಪಿ ಶುಭಂ ಲೋಂಕರ್ ಕೂಡ ಬೇಕಾಗಿರುವ ಪಟ್ಟಿಯಲ್ಲಿದ್ದಾನೆ.
‘ನನಗೆ ಮತ್ತು ಗುಜರಿ ಅಂಗಡಿ ಮಾಲೀಕ ಹರೀಶ್ ಕುಮಾರ್ ಕಶ್ಯಪ್ ಅವರಿಗೆ ಶುಭಂ ಲೋಂಕರ್ ಮೂಲಕ ಅನ್ಮೋಲ್ ಬಿಷ್ಣೋಯಿ ಪರಿಚಯವಾಯಿತು. ಅವರಿಂದ ಹಣ ಪಡೆದಿದ್ದು, ಅವರು ಹೇಳಿದ ಹಾಗೆಯೇ ಕೆಲಸ ಮುಗಿಸಿದ್ದೇವೆ’ ಎಂದು ಪೊಲೀಸರ ಬಳಿ ಶಿವಕುಮಾರ್ ವಿವರಿಸಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.