ಮುಂಬೈ: ‘ಮತ ಕಳ್ಳತನ’ ಆರೋಪದ ವಿರುದ್ಧ ಆಂದೋಲನ ನಡೆಸುವಂತೆ ಒತ್ತಾಯಿಸಿ ಪುಣೆಯಲ್ಲಿ ತಮ್ಮ ಭಿತ್ತಿಫಲಕಗಳನ್ನು ಅಳವಡಿಸಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭಾನುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಆರೋಪದ ವಿರುದ್ಧ ಎಚ್ಚೆತ್ತುಕೊಳ್ಳಿ. ಯುವಸಮೂಹವು ಆಂದೋಲನ ಮುನ್ನಡೆಸುವ ಸಮಯ ಬಂದಿದೆ’ ಎಂದಿದ್ದಾರೆ.
‘ನನ್ನ ಹೋರಾಟದಿಂದ 10 ಕಾನೂನುಗಳು ಜಾರಿಯಾಗಿವೆ. 90 ವರ್ಷ ದಾಟಿದ್ದೇನೆ. ಜನರು ಗಾಢನಿದ್ದೆಯಲ್ಲಿರುವಾಗ ನಾನೇ ಎಲ್ಲವನ್ನೂ ಮಾಡಬೇಕು ಎಂದು ನಿರೀಕ್ಷಿಸಿದರೆ ಅದು ತಪ್ಪು. ಈ ಹಿಂದೆ ನಾನು ಮಾಡಿದ್ದನ್ನು ಯುವಸಮೂಹವು ಇದೀಗ ಮುನ್ನಡೆಸಬೇಕು’ ಎಂದು ಹೇಳಿದರು.
‘ಇಷ್ಟು ವರ್ಷಗಳ ಹೋರಾಟದ ನಂತರವೂ ಸಮಾಜ ಎಚ್ಚೆತ್ತುಕೊಂಡಿಲ್ಲ. ಗಾಂಧಿಯ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸಾಮಾಜಿಕ, ಆರ್ಥಿಕ ಸಮಸ್ಯೆಗಳ ವಿರುದ್ಧ ಯುವಜನರು ಹೋರಾಟ ನಡೆಸಬೇಕು’ ಎಂದರು.
ಸ್ಥಳೀಯ ಕಾರ್ಯಕರ್ತ ಸಮೀರ್ ಉತ್ತರ್ಕರ್ ಹೆಸರಿನಲ್ಲಿ ಪುಣೆಯ ಪಶಾನ್ ಪ್ರದೇಶದಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.
‘ಅಣ್ಣಾ, ಕನಿಷ್ಠ ಪಕ್ಷ ಈಗಲಾದರೂ ಎಚ್ಚರಗೊಳ್ಳಿ. ರಾವಣ ಮತ್ತು ಲಂಕೆಗಾಗಿ ಕುಂಭಕರ್ಣ ಸಹ ತನ್ನ ದೀರ್ಘ ನಿದ್ದೆಯಿಂದ ಎದ್ದಿದ್ದ. ದೇಶಕ್ಕಾಗಿ ನೀವು ಈಗ ಅದೇ ರೀತಿ ಏಕೆ ಮಾಡಬಾರದು?’ ಎಂಬ ಬರಹ ಬ್ಯಾನರ್‌ನಲ್ಲಿದೆ.
‘ಈ ಹಿಂದೆ ನವದೆಹಲಿಯ ಜಂತರ್ ಮಂತರ್‌ನಲ್ಲಿ ನೀವು ಮಾಡಿದ್ದ ‘ಮ್ಯಾಜಿಕ್’ ಅನ್ನು ಮತ್ತೊಮ್ಮೆ ನೋಡಲು ದೇಶವು ಉತ್ಸುಕವಾಗಿದೆ. ಚುನಾವಣಾ ಆಯೋಗದ ಅಕ್ರಮಗಳ ಬಗ್ಗೆ ಧ್ವನಿಯೆತ್ತಿ. ಆಂದೋಲನವನ್ನು ಮುನ್ನಡೆಸಿ’ ಎಂಬ ಆಗ್ರಹವುಳ್ಳ ಬರಹವು ಮತ್ತೊಂದು ಭಿತ್ತಿಫಲಕದಲ್ಲಿದೆ.
ನಾಗರಿಕರಾಗಿ ನಮಗೆ ಕರ್ತವ್ಯಗಳಿಲ್ಲವೇ? ಬೇರೆಯವರ ಕಡೆ ಬೆರಳು ತೋರಿಸುವುದರಿಂದ ಏನನ್ನು ಸಾಧಿಸಲಾಗುವುದಿಲ್ಲಅಣ್ಣಾ ಹಜಾರೆ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.