ನವದೆಹಲಿ: ‘ಈಗಿನ ಸರ್ವಾಧಿಕಾರಿ ಸರ್ಕಾರದ ವಿರುದ್ಧ ಕ್ವಿಟ್ ಇಂಡಿಯಾ ಮಾದರಿಯ ಚಳವಳಿಯೊಂದನ್ನು ನಡೆಸುವ ಅಗತ್ಯವಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಕ್ವಿಟ್ ಇಂಡಿಯಾ ಚಳವಳಿಯ 80ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಪ್ರಕಟಿಸಿರುವ ಅವರು, ‘1942ರ ಆಗಸ್ಟ್ 8ರಂದು ಆಗಿನ ಬಾಂಬೆಯಲ್ಲಿ ನಡೆದಿದ್ದ ಚಳವಳಿಯು ಬ್ರಿಟಿಷರ ನಿದ್ದೆಗೆಡಿಸಿತ್ತು. ಈಗ ದೇಶದ ರಕ್ಷಣೆಗಾಗಿ ಅಂತಹ ಚಳವಳಿಯೊಂದರ ಅಗತ್ಯ ಹೆಚ್ಚಿದೆ. ಸರ್ವಾಧಿಕಾರ, ನಿರುದ್ಯೋಗ ಮತ್ತು ಹಣದುಬ್ಬರವನ್ನು ಭಾರತದಿಂದಲೇ ಕಿತ್ತೊಗೆಯಬೇಕಿದೆ’ ಎಂದು ಕಿಡಿಕಾರಿದ್ದಾರೆ.
‘1942ರ ಆಗಸ್ಟ್ 8ರಂದು ಗೊವಾಲಿಯಾ ಟ್ಯಾಂಕ್ ಮೈದಾನದಲ್ಲಿ ಸಾಗರೋಪಾದಿಯಲ್ಲಿ ಜನ ಸೇರಿದ್ದರು. ಆಗ ಗಾಂಧೀಜಿ ‘ಮಾಡು ಇಲ್ಲವೆ ಮಡಿ’ ಎಂಬ ಘೋಷವಾಕ್ಯ ಪ್ರಕಟಿಸಿದ್ದರು. ಜನರು ತಮ್ಮ ಜೀವವನ್ನೂ ಲೆಕ್ಕಿಸದೆ ಆ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ 940 ಮಂದಿ ಹುತಾತ್ಮರಾಗಿದ್ದರು. ಸಾವಿರಾರು ಮಂದಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದರು. ದೇಶಕ್ಕಾಗಿ ಪ್ರಾಣ ತೆತ್ತ ಸ್ವಾತಂತ್ರ್ಯ ಸೇನಾನಿಗಳಿಗೆ ನನ್ನ ನಮನಗಳು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.