ADVERTISEMENT

ಜ್ಞಾನವಾಪಿ ಪ್ರಕರಣದ ಮತ್ತೊಬ್ಬ ಫಿರ್ಯಾದುದಾರನಿಗೆ ವಿದೇಶದಿಂದ ಕೊಲೆ ಬೆದರಿಕೆ ಕರೆ 

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 4:37 IST
Last Updated 29 ಆಗಸ್ಟ್ 2022, 4:37 IST
ವಾರಾಣಸಿಯ ಶೃಂಗಾರ ಗೌರಿ-ಜ್ಞಾನವಾಪಿ ಮಸೀದಿ
ವಾರಾಣಸಿಯ ಶೃಂಗಾರ ಗೌರಿ-ಜ್ಞಾನವಾಪಿ ಮಸೀದಿ   

ವಾರಾಣಸಿ: ಶೃಂಗಾರ ಗೌರಿ-ಜ್ಞಾನವಾಪಿ ಮಸೀದಿ ಪ್ರಕರಣದ ಇನ್ನೊಬ್ಬ ಫಿರ್ಯಾದುದಾರನಿಗೆ ವಿದೇಶಿ ಸಂಖ್ಯೆಯಿಂದ ಕರೆ ಬಂದಿದ್ದು, ಕೊಲೆ ಬೆದರಿಕೆ ಹಾಕಲಾಗಿದೆ.

ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ 1991ರಲ್ಲಿ ದಾಖಲಾದ ಮತ್ತೊಂದು ಪ್ರಕರಣದಲ್ಲಿ ಹರಿಹರ ಪಾಂಡೆ ಎಂಬುವವರಿಗೆ ಸದ್ಯ ಬೆದರಿಕೆ ಕರೆ ಬಂದಿದೆ.

‘ನನ್ನ ಮೊಬೈಲ್‌ಗೆ ವಿದೇಶಿ ಸಂಖ್ಯೆಗಳಿಂದ ಎರಡು ಕರೆಗಳು ಬಂದಿವೆ’ ಎಂದು ಪಾಂಡೆ ಹೇಳಿಕೊಂಡಿದ್ದಾರೆ.

ADVERTISEMENT

‘ಕರೆ ಮಾಡಿದವರು ಜ್ಞಾನವಾಪಿ ಮಸೀದಿ ಪ್ರಕರಣವನ್ನು ಪ್ರಸ್ತಾಪಿಸಿ, ನನ್ನನ್ನು ಮಾತ್ರವಲ್ಲದೇ, ನನ್ನ ಇಡೀ ಕುಟುಂಬವನ್ನು ಕೊಂದು ಹಾಕುವುದಾಗಿಯೂ, ಕತ್ತರಿಸಿದ ತಲೆಗಳ ಫೋಟೊಗಳನ್ನು ಕಳುಹಿಸುವುದಾಗಿಯೂ ಬೆದರಿಕೆ ಹಾಕಿದರು. ನಂತರ ಕರೆ ಕಡಿತಗೊಳಿಸಿದರು’ ಎಂದು ಪಾಂಡೆ ಹೇಳಿದ್ದಾರೆ.

ವಾರಾಣಸಿಯ ‘ಕಾಶಿ ಜ್ಞಾನವಾಪಿ ಅಭಿಯುಕ್ತ ಕ್ಷೇತ್ರ ನ್ಯಾಸ್ (ಟ್ರಸ್ಟ್)’ ಅಧ್ಯಕ್ಷ ಎಂದು ಹೇಳಿಕೊಂಡಿರುವ ಪಾಂಡೆ ಅವರು, ಕಾಶಿ ಜ್ಞಾನವಾಪಿ ಪ್ರಕರಣದಲ್ಲಿ (ಸಂಖ್ಯೆ 610. 1991) ಪ್ರಮುಖ ವಾದಿಯಾಗಿದ್ದಾರೆ.

‘ಪಾಂಡೆ ಅವರಿಗೆ ಬೆದರಿಕೆ ಕರೆಗಳು ಬಂದ ಬಗ್ಗೆ ನಮಗೆ ದೂರು ಬಂದಿದೆ. ನಾವು ಸೆಕ್ಷನ್ 507 (ಅನಾಮಧೇಯ ಮೂಲದ ಸಂವಹನದಿಂದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಈ ಪ್ರಕರಣದ ತನಿಖೆ ಆರಂಭವಾಗಿದೆ’ ಎಂದು ಲುಕ್ಸಾ ಠಾಣಾಧಿಕಾರಿ, ಅನಿಲ್ ಸಾಹು ಸೋಮವಾರ ತಿಳಿಸಿದ್ದಾರೆ.

ಬೆದರಿಕೆ ಹಿನ್ನೆಲೆಯಲ್ಲಿ ಪಾಂಡೆ ಅವರ ಭದ್ರತೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

ಇದಕ್ಕೂ ಹಿಂದೆ, ಇದೇ ಪ್ರಕರಣದಲ್ಲಿ ವಾದಿಯಾಗಿರುವ ಮಹಿಳೆಯೊಬ್ಬರಿಗೂ ವಿದೇಶದಿಂದ ಕರೆ ಬಂದಿತ್ತು. ಅವರಿಗೂ ಕೊಲೆ ಬೆದರಿಕೆ ಹಾಕಲಾಗಿತ್ತು.

ಮಸೀದಿಯಲ್ಲಿನ ಶೃಂಗಾರ ಗೌರಿಯನ್ನು ಪೂಜಿಸಲು ಅವಕಾಶ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿ, ಮಸೀದಿಯ ಸಮೀಕ್ಷೆಗೆ ಆದೇಶಿಸಿದ್ದ ವಾರಾಣಸಿಯ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೂ ಜೂನ್‌ನಲ್ಲಿ ‘ಇಸ್ಲಾಮಿಕ್ ಅಗಾಜ್ ಮೂವ್‌ಮೆಂಟ್‌’ನಿಂದ ಬೆದರಿಕೆ ಪತ್ರ ಬಂದಿತ್ತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.