ಜೈರಾಮ್ ರಮೇಶ್
ಅಹಮದಾಬಾದ್: ರಾಜಸ್ಥಾನದ ಆಳ್ವಾರ್‌ನಲ್ಲಿನ ರಾಮಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ದಲಿತ ಶಾಸಕ ಟಿಕಾರಾಂ ಜುಲ್ಲಿ ಭಾಗವಹಿಸಿದ ಬೆನ್ನಲ್ಲೇ, ಬಿಜೆಪಿ ಮುಖಂಡ ಗ್ಯಾನ್ ದೇವ್ ಅಹುಜಾ ಅವರು ‘ಗಂಗಾ ಜಲ’ ಸಿಂಪಡಿಸಿ ಮಂದಿರವನ್ನು ಶುದ್ಧೀಕರಿಸಿದ್ದಾರೆ.
ಇದು ‘ಬಿಜೆಪಿಯ ದಲಿತ ವಿರೋಧಿ ನಡೆ’ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ. ‘ಪಕ್ಷದ ಮುಖಂಡನ ಈ ರೀತಿಯ ನಡೆಗಾಗಿ ಬಿಜೆಪಿಯ ಉನ್ನತ ನಾಯಕರು ಕ್ಷಮೆಯಾಚಿಸಬೇಕು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಂಗಳವಾರ ಆಗ್ರಹಿಸಿದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತದಲ್ಲಿಯೇ ದಲಿತವಿರೋಧಿ, ತಾರತಮ್ಯದ ಮನಃಸ್ಥಿತಿ ಬೇರೂರಿದೆ. ನಾಗ್ಪುರದ ಕೇಂದ್ರ ಕಚೇರಿಯಲ್ಲೇ ಈ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಜೈರಾಮ್ ರಮೇಶ್ ಅವರು ‘ಎಕ್ಸ್’ ಜಾಲತಾಣದ ಮೂಲಕ ಟೀಕಿಸಿದ್ದಾರೆ.
ಮಂದಿರ ಶುದ್ಧೀಕರಣ ಕ್ರಮವನ್ನು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಇತರ ಮುಖಂಡರು ‘ಇದು, ದಲಿತರಿಗೆ ಮಾಡಲಾದ ಅವಮಾನ’ ಎಂದು ಖಂಡಿಸಿದ್ದಾರೆ.
ಆದರೆ, ‘ಶುದ್ಧೀಕರಣಕ್ಕೆ ಜಾತಿ ಆಯಾಮ ಇಲ್ಲ’ ಎಂದು ತನ್ನ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಅಹುಜಾ, ‘ರಾಮನ ಅಸ್ತಿತ್ವವನ್ನೇ ಪ್ರಶ್ನಿಸುವ ಕಾಂಗ್ರೆಸ್ ನಾಯಕರಿಗೆ ರಾಮಮಂದಿರಕ್ಕೆ ಭೇಟಿ ನೀಡುವ ನೈತಿಕ ಅಧಿಕಾರವೇ ಇಲ್ಲ’ ಎಂದು ಪ್ರತಿಪಾದಿಸಿದ್ದರು.
ವಿಧಾನಸಭೆ ಪ್ರತಿಪಕ್ಷದ ನಾಯಕ ಪಕ್ಷದ ದಲಿತ ಮುಖಂಡರ ಭೇಟಿ ಬಳಿಕ ರಾಮಮಂದಿರ ಶುದ್ಧೀಕರಿಸುವ ಬಿಜೆಪಿ ನಾಯಕರ ನಡೆ ಆ ಪಕ್ಷದಲ್ಲಿ ದಲಿತ ವಿರೋಧಿ ಮನಃಸ್ಥಿತಿ ಬೇರೂರಿರುವುದನ್ನು ಬಿಂಬಿಸುತ್ತದೆಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.